Prema Baraha Movie Review
ಪ್ರೇಮಿಗಳ ದಿನ ಹತ್ತಿರಕ್ಕೆ ಬರುತ್ತಿದೆ. ಈ ವರ್ಷದ ಪ್ರೇಮಿಗಳ ದಿನಕ್ಕಾಗಿ ‘ಪ್ರೇಮ ಬರಹ’ ಸಿನಿಮಾ ಬಿಡುಗಡೆಯಾಗಿದೆ. ಚಿತ್ರದ ಟೈಟಲ್ ನಲ್ಲಿಯೇ ‘ಪ್ರೇಮ’ ಎಂಬ ಪದ ಇದೆ. ಆದರೆ ಈ ಪ್ರೇಮ ಬರೀ ಚಿತ್ರದ ನಾಯಕ ನಾಯಕಿಯ ಪ್ರೇಮಕ್ಕೆ ಸೀಮಿತವಾಗಿಲ್ಲ. ಬದಲಿಗೆ ಇಲ್ಲಿ ತಂದೆ, ತಾಯಿಯ ಪ್ರೇಮ, ಅಜ್ಜನ ಪ್ರೇಮ, ಎಲ್ಲದಕ್ಕಿಂತ ಹೆಚ್ಚಾಗಿ ಯೋಧರ ದೇಶಪ್ರೇಮ ಸಿನಿಮಾದಲ್ಲಿ ಇದೆ. ‘ಪ್ರೇಮಬರಹ’ ಒಂದು ಶುಭ್ರ ಪ್ರೇಮಕಥೆಯ ಸಿನಿಮಾ.

Rating: 3.5/5
ಸಿನಿಮಾ : ಪ್ರೇಮ ಬರಹ
ಅವಧಿ : 2 ಗಂಟೆ 38 ನಿಮಿಷ
ಕಥೆ, ನಿರ್ದೇಶನ  : ಅರ್ಜುನ್ ಸರ್ಜಾ
ನಿರ್ಮಾಣ : ನಿವೇದಿತಾ ಅರ್ಜುನ್
ಸಂಗೀತ: ಜಸ್ಸಿ ಗಿಫ್ಟ್
ಛಾಯಾಗ್ರಹಣ: ಹೆಚ್.ಸಿ.ವೇಣು
ತಾರಾಗಣ : ಚಂದನ್, ಐಶ್ವರ್ಯ ಅರ್ಜುನ್, ಸುಹಾಸಿನಿ, ಕೆ.ವಿಶ್ವನಾಥ್, ಸಾಧುಕೋಕಿಲ, ರಂಗಾಯಣ ರಘು, ಪ್ರಕಾಶ್ ರೈ ಇತರರು. ಬಿಡುಗಡೆಯ ದಿನ : ಫೆಬ್ರವರಿ 9

ಹೇಗಿದೆ ಸಿನಿಮಾ ?

‘ಪ್ರೇಮ ಬರಹ’ ಒಂದು ಒಳ್ಳೆಯ ಸಿನಿಮಾ. ಚಿತ್ರದಲ್ಲಿ ಒಂದು ಮುದ್ದಾದ ಲವ್ ಸ್ಟೋರಿ ಇದೆ. ಆದರೆ ಆ ಲವ್ ಸ್ಟೋರಿ ಬೇರೆ ಸಿನಿಮಾಗಳಲ್ಲಿ ನಡೆಯುವ ಲವ್ ಸ್ಟೋರಿಗಿಂತ ಕೊಂಚ ಭಿನ್ನವಾಗಿದೆ. ಟಿಕೆಟ್ ಪಡೆದು ಸೀಟ್ ಮೇಲೆ ಕುಳಿತ ಪ್ರೇಕ್ಷಕರಿಗೆ ಸಿನಿಮಾ ಮೋಸ ಮಾಡುವುದಿಲ್ಲ. ಮನರಂಜನೆ ಜೊತೆ ಜೊತೆಗೆ ಅನೇಕ ಭಾವನಾತ್ಮಕ ಅಂಶಗಳು ಚಿತ್ರದಲ್ಲಿದೆ. ಸಾಮಾನ್ಯ ಪ್ರೇಕ್ಷಕರು ಬಯಸುವ ಪ್ರೇಮಕಥೆ, ಹಾಡು, ಫೈಟ್, ಡ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲ ಅಂಶಗಳನ್ನು ಒಳಗೊಂಡ ಒಂದು ಅಚ್ಚುಕಟ್ಟಾದ ಸುಂದರ ಸಿನಿಮಾ ‘ಪ್ರೇಮ ಬರಹ’.

ಮೆಚ್ಚಿಕೊಳ್ಳಬೇಕಾದ ಅಂಶಗಳು

ನಟ ಚಂದನ್ ಅವರ ಸಾಹಸ ದೃಶ್ಯಗಳು
ನಟಿ ಐಶ್ವರ್ಯ ಅವರ ಡ್ಯಾನ್ಸ್
ಚಂದನ್ ಹಾಗೂ ಐಶ್ವರ್ಯ ನಟನೆ,ಇಬ್ಬರ ಆನ್ ಸ್ಕ್ರೀನ್ ಅಪಿಯರೆನ್ಸ್
ಹೆಚ್.ಸಿ.ವೇಣು ಕ್ಯಾಮರಾ ವರ್ಕ್

ಗಮನ ಹರಿಸಬೇಕಾಗಿದ್ದ ಅಂಶಗಳು

ಸಂಗೀತ (ಇನ್ನು ಒಳ್ಳೆಯ ಹಾಡುಗಳು ಬೇಕಿತ್ತು)
ಕೆಲವು ಸನ್ನಿವೇಶಗಳಲ್ಲಿ ಲಿಂಕ್ ಮಿಸ್ (ಆಂಜನೇಯನ ಹಾಡಿನ ದೃಶ್ಯ)
ಕೆಲವು ಹಾಸ್ಯ ದೃಶ್ಯಗಳಿಗೆ ಕಡಿವಾಣ ಹಾಕಬಹುದಾಗಿತ್ತು (ಫಸ್ಟ್ ಹಾಫ್ ಕಾಮಿಡಿ)

ಕಥೆ
‘ಪ್ರೇಮ ಬರಹ’ ಸಿನಿಮಾ 1999ರಲ್ಲಿ ನಡೆಯುವ ಕಥೆಯಾಗಿದೆ. ಚಿತ್ರದ ನಾಯಕ ಸಂಜಯ್ (ಚಂದನ್) ಮತ್ತು ಮಧು (ಐಶ್ವರ್ಯ) ಇಬ್ಬರು ಬೇರೆ ಬೇರೆ ಸುದ್ದಿ ವಾಹಿನಿಗಳಲ್ಲಿ ವರದಿಗಾರರಾಗಿರುತ್ತಾರೆ. ತಂದೆ ತಾಯಿ ಕಳೆದುಕೊಂಡಿದ್ದ ಮಧು ತನ್ನ ಆಂಟಿ (ಸುಹಾಸಿನಿ) ಜೊತೆಗೆ ಬೆಳೆದಿರುತ್ತಾಳೆ. ಮಧುವನ್ನು ತನ್ನ ಸೊಸೆ ಮಾಡಿಕೊಳ್ಳಬೇಕು ಎನ್ನುವುದು ಅವರ ಆಸೆ ಆಗಿರುತ್ತದೆ. ಅದೇ ರೀತಿ ತಮ್ಮ ಮಗನ ಜೊತೆಗೆ ಮಧುವನ್ನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಇತ್ತ ಎರಡು ಬೇರೆ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಸಂಜಯ್ ಮತ್ತು ಮಧು ನಡುವೆ ಆಗಾಗ ಸಣ್ಣ ಕಿರಿಕ್ ಆಗುತ್ತಿರುತ್ತದೆ. ಹೀಗೆ ಮುಂದುವರೆದಾಗ ಕಾರ್ಗಿಲ್ ಯುದ್ಧವನ್ನು ಲೈವ್ ಕವರೇಜ್ ಮಾಡಲು ಇಬ್ಬರು ತಮ್ಮ ತಮ್ಮ ವಾಹಿನಿಯಿಂದ ಹೋಗುತ್ತಾರೆ. ಅಲ್ಲಿನ ಬಾಂಬ್.. ಗುಂಡು.. ಸದ್ದುಗಳ ಆ ಕರಾಳ ಭೂಮಿಯಲ್ಲಿ ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಭಾರತ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಗೆದ್ದರೆ, ಈ ಇಬ್ಬರು ಪರಸ್ಪರ ಪ್ರೀತಿಯಲ್ಲಿ ಸೋಲುತ್ತಾರೆ. ಮುಂದೆ ಇಬ್ಬರು ತಮ್ಮ ಪ್ರೀತಿಯನ್ನು ಒಬ್ಬರಿಗೊಬ್ಬರು ವ್ಯಕ್ತ ಪಡಿಸುತ್ತಾರಾ… ಈ ಜೋಡಿ ಕೊನೆಗೆ ಒಂದಾಗುತ್ತಾ… ಸಿನಿಮಾ ಹ್ಯಾಪಿ ಎಂಡಿಂಗಾ.. ಅಥವಾ ಸ್ಯಾಡ್ ಎಂಡಿಗಾ.. ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.

ಫಸ್ಟ್ ಹಾಫ್, ಸೆಕೆಂಡ್ ಹಾಫ್
ಸಿನಿಮಾದ ಮೊದಲಾರ್ಧದಲ್ಲಿ ಸಿಕ್ಕಾಪಟ್ಟೆ ಮನರಂಜನೆ ಅಂಶಗಳಿದೆ. ಇಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದೆ. ದ್ವಿತೀಯಾರ್ಧದ ಕಥೆಯಲ್ಲಿ ಕಾರ್ಗಿಲ್ ಯುದ್ಧ ಮತ್ತು ನಾಯಕ ನಾಯಕಿಯ ಲವ್ ಸ್ಟೋರಿ ಇದೆ. ಕ್ಲೈಮ್ಯಾಕ್ಸ್ ನಲ್ಲಿ ಒಂದು ದೊಡ್ಡ ತಿರುವು ಬರುತ್ತದೆ. ಮೊದಲಾರ್ಧ ಮತ್ತು ದ್ವಿತೀಯಾರ್ಧದ ಅವಧಿ ಕೆಲವೊಮ್ಮೆ ಸ್ವಲ್ಪ ಜಾಸ್ತಿ ಆಯ್ತು ಅನಿಸಿದರೂ.. ಸಿನಿಮಾದಲ್ಲಿ ಬರುವ ಯೋಧರ ಸನ್ನಿವೇಶಗಳಿಂದ ಸಣ್ಣ ಪುಟ್ಟ ತಪ್ಪುಗಳನ್ನು ಪ್ರೇಕ್ಷಕ ಮರೆತು ಬಿಡುತ್ತಾನೆ.

ಡೈರೆಕ್ಷನ್ ಮತ್ತು ಸ್ಕ್ರೀನ್ ಪ್ಲೇ
ತಮ್ಮ ಮಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಅರ್ಜುನ್ ಸರ್ಜಾ ನಟಿ ಐಶ್ವರ್ಯಗೆ ಪೂರಕ ಆಗಿರುವ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಅರ್ಜುನ್ ಸರ್ಜಾ ಡೈರೆಕ್ಷನ್ ಬಗ್ಗೆ ಮಾತನಾಡುವ ಹಾಗಿಲ್ಲ. ಚಿತ್ರದ ಮೇಕಿಂಗ್ ತುಂಬ ಚೆನ್ನಾಗಿ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಎಲ್ಲ ಅಂಶಗಳನ್ನು ತುಂಬಿಸಿ ಪವರ್ ಫ್ಯಾಕ್ ಆಗಿ ಕಟ್ಟಿಕೊಟ್ಟಿದ್ದಾರೆ. ಸ್ಕ್ರೀನ್ ಪ್ಲೇ ಗಮನ ಸೆಳೆಯುತ್ತದೆ. ಸಿಂಪಲ್ ಕಥೆಯನ್ನು ಹೇಳಿರುವ ಅವರ ನಿರೂಪಣಾ ಶೈಲಿ ಹೊಸದಾಗಿದೆ.

ಲವಲವಿಕೆಯ ನಟನೆ
ನಟ ಚಂದನ್ ಮತ್ತು ನಟಿ ಐಶ್ವರ್ಯ ಅಭಿನಯದಲ್ಲಿ ಪಾಸ್ ಆಗಿದ್ದಾರೆ. ಚಂದನ್ ಕೆಲವು ಸನ್ನಿವೇಶದಲ್ಲಿ ಇನ್ನಷ್ಟು ಸಹಜವಾಗಿ ನಟಿಸಬಹುದಾಗಿತ್ತು. ಆದರೆ ಅವರ ಸಾಹಸ ಚಿತ್ರದ ಹೈಲೈಟ್. ನಟಿ ಐಶ್ವರ್ಯ ಅವರ ಲವಲವಿಕೆ ತುಂಬ ಇಷ್ಟ ಆಗುತ್ತದೆ. ಕೆಲವು ಭಾವನಾತ್ಮಕ ದೃಶ್ಯಗಳನ್ನು ಅವರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಐಶ್ವರ್ಯ ಡ್ಯಾನ್ಸ್ ಸೂಪರ್. ಚಿತ್ರದ ಹಾಡುಗಳನ್ನು ಕೇಳುವ ಮನಸ್ಸು ಇಲ್ಲದಿದ್ದರೂ.. ಅವರ ಡ್ಯಾನ್ಸ್ ನೋಡದೆ ಇರಲಾಗುವುದಿಲ್ಲ. ಉಳಿದಂತೆ ಸುಹಾಸಿನಿ, ಕೆ.ವಿಶ್ವನಾಥ್, ಸಾಧುಕೋಕಿಲ, ರಂಗಾಯಣ ರಘು, ಪ್ರಕಾಶ್ ರೈ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಂದು ಹಾಡಿನಲ್ಲಿ ನಟ ದರ್ಶನ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಬಂದು ಹೋಗುತ್ತಾರೆ.

ಸಂಗೀತ ಮತ್ತು ಕ್ಯಾಮರಾ
ಜೆಸ್ಸಿ ಗಿಫ್ಟ್ ಹಾಡುಗಳು ಮತ್ತೆ ಮತ್ತೆ ಕೇಳುವ ರೀತಿ ಇಲ್ಲ. ಸಿನಿಮಾ ನೋಡುವ ಸಂದರ್ಭಕ್ಕೆ ಆ ಹಾಡುಗಳು ಓಕೆ. ‘ಪ್ರೇಮ ಬರಹ’ ಟೈಟಲ್ ಸಾಂಗ್ ಬಿಟ್ಟರೆ ಬೇರೆ ಹಾಡುಗಳು ಮನಸ್ಸಿಗೆ ಮುಟ್ಟುವುದಿಲ್ಲ. ಚಿತ್ರ ಒಂದು ಲವ್ ಸ್ಟೋರಿ ಆಗಿರುವ ಕಾರಣ ಹಾಡುಗಳು ಇನ್ನೂ ಪರಿಣಾಮಕಾರಿ ಆಗಿದ್ದರೆ ಸಿನಿಮಾದ ಶಕ್ತಿ ಮತ್ತಷ್ಟು ಜಾಸ್ತಿಯಾಗುತ್ತಿತ್ತು. ಹೆಚ್.ಸಿ.ವೇಣು ಕ್ಯಾಮರಾ ವರ್ಕ್ ಸಿನಿಮಾ ನೋಡುಗರ ಕಣ್ಣಿಗೆ ಹಬ್ಬ. ವೇಣು ಅವರು ತೆಗೆದಿರುವ ಕೆಲವು ಶಾಟ್ ನಿಜಕ್ಕೂ ಅದ್ಬುತವಾಗಿದೆ.

ಪ್ರೇಮಿಗಳ ದಿನಕ್ಕೆ ಬಂದಿರುವ ಕಾಣಿಕೆ
ಕೊನೆಯದಾಗಿ ಹೇಳಬೇಕು ಅಂದರೆ ‘ಪ್ರೇಮ ಬರಹ’ ಪಕ್ಕಾ ಫ್ಯಾಮಿಲಿ ಸಿನಿಮಾ. ಡಬ್ಬಲ್ ಮೀನಿಂಗ್… ಐಟಂ ಸಾಂಗ್… ಈ ರೀತಿಯ ಯಾವುದು ಕಿರಿಕಿರಿ ಸಿನಿಮಾದಲ್ಲಿ ಇಲ್ಲ. ಪ್ರೇಮಿಗಳ ದಿನಕ್ಕೆ ಅರ್ಜುನ್ ಸರ್ಜಾ ಕುಟುಂಬದಿಂದ ಬಂದಿರುವ ಒಂದು ಸುಂದರ ಕಾಣಿಕೆ ಇದು. ಹೆಚ್ಚು ನಿರೀಕ್ಷೆ ಇಲ್ಲದೆ ಆರಾಮಾಗಿ ಸಿನಿಮಾ ನೋಡಿ ಖಂಡಿತ ಇಷ್ಟ ಆಗುತ್ತದೆ.