5 devrantha manushya 1517566541

”ದರ್ಶನ್ ಹೊಡೆದರೆ, ಅಷ್ಟು ಎತ್ತರಕ್ಕೆ ಹೋಗಿ ಬೀಳ್ತಾರೆ. ಅಪ್ಪು ಹೊಡೆದರೆ ಅಷ್ಟು ದೂರ ಹೋಗಿ ಬೀಳ್ತಾರೆ. ಯಶ್ ಹೊಡೆದರೆ ಕೆಳಕ್ಕೆ, ಸುದೀಪ್ ತುಳಿದರೆ ಪಾತಾಳದ ಒಳಕ್ಕೆ… ನಾನು ಅವರೆಲ್ಲರಿಗಿಂತಲೂ ಕಮ್ಮಿ.! ನಾನು ಹೊಡೀತೀನಿ. ಇಲ್ಲೇ ಬಿದ್ಕೊಳ್ರೋ.. ಪ್ಲೀಸ್ ಕಣ್ರೋ…” – ಇದು ‘ದೇವ್ರಂಥ ಮನುಷ್ಯ’ ಚಿತ್ರದಲ್ಲಿ ‘ಹೀರೋ’ ಪ್ರಥಮ್ ಬಾಯಿಂದ ಬರುವ ಡೈಲಾಗ್.

Rating: 3.0/5
‘ದೇವ್ರಂಥ ಮನುಷ್ಯ’ ಸಿನಿಮಾ ಹೇಗಿದೆ ಅಂತ ವರ್ಣಿಸೋಕೆ ಇದೊಂದು ಡೈಲಾಗ್ ಸಾಕು.! ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ, ಇದು ದರ್ಶನ್, ಪುನೀತ್, ಯಶ್, ಸುದೀಪ್ ಅಂತಹ ಸ್ಟಾರ್ ಗಳ ಸಿನಿಮಾಗಳಲ್ಲಿ ಇರುವಂತೆ ಭರ್ಜರಿ ಡೈಲಾಗ್ಸ್, ಮಾಸ್ ಫೈಟ್ಸ್, ಜಬರ್ದಸ್ತ್ ಡ್ಯಾನ್ಸ್ ಇಲ್ಲಿ ಇಲ್ಲ. ‘ದೇವ್ರಂಥ ಮನುಷ್ಯ’ ಪಕ್ಕಾ ‘ಬಿಗ್ ಬಾಸ್’ ಪ್ರಥಮ್ ಸ್ಟೈಲ್ ಸಿನಿಮಾ. ಹೀಗಾಗಿ ಇಲ್ಲಿ ಏನಿದ್ದರೂ, ಮಾತು.. ಮಾತು.. ಮತ್ತು ಮಾತು.

ಚಿತ್ರ: ದೇವ್ರಂಥ ಮನುಷ್ಯ
ನಿರ್ಮಾಣ: ಮಂಜುನಾಥ್.ಹೆಚ್.ಸಿ, ತಿಮ್ಮರಾಜು.ಕೆ
ಚಿತ್ರಕಥೆ, ನಿರ್ದೇಶನ: ಕಿರಣ್ ಶೆಟ್ಟಿ
ಸಂಗೀತ: ಪ್ರದ್ಯೋತನ್
ತಾರಾಗಣ: ಪ್ರಥಮ್, ಶ್ರುತಿ, ವೈಷ್ಣವಿ, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಮತ್ತು ಇತರರು.
ಬಿಡುಗಡೆ: ಫೆಬ್ರವರಿ 2, 2018

‘ದೇವ್ರಂಥ ಮನುಷ್ಯ’ನ ವೃತ್ತಾಂತ

‘ದೇವ್ರಂಥ ಮನುಷ್ಯ’ ಚಿತ್ರದ ಕಥಾನಾಯಕ ಪ್ರಥಮ್… ‘ಒಳ್ಳೆ ಹುಡುಗ’ ಪ್ರಥಮ್. ಹೆಸರಿಗೆ ತಕ್ಕ ಹಾಗೆ ಈತ ಒಳ್ಳೆಯ ಹುಡುಗ. ಒಳ್ಳೊಳ್ಳೆಯ ಕೆಲಸಗಳನ್ನೂ ಮಾಡುವ ಈತ ‘ದೇವ್ರಂಥ ಮನುಷ್ಯ’. ಆದ್ರೆ, ಈತನಿಗೆ ನೀವು ಸಂಜೆ ಮೇಲೆ ಸಿಗಲೇಬಾರದು. ಅಪ್ಪಿ ತಪ್ಪಿ ಸಿಕ್ಕಿದ್ರೆ ನಿಮಗೆ ಉಂಡೆನಾಮ ಗ್ಯಾರೆಂಟಿ.

ಸಂಜೆ ಮೇಲೆ ಯಾಕೆ ಸಿಗಬಾರದು.?

ದೇವಸ್ಥಾನದಲ್ಲಿ ದೇವರು ಇರ್ತಾನೋ, ಇಲ್ವೋ ಗೊತ್ತಿಲ್ಲ. ಆದ್ರೆ, ಸಂಜೆ ಆಗ್ತಿದ್ದ ಹಾಗೆ ‘ದೇವ್ರಂಥ ಮನುಷ್ಯ’ ಪ್ರಥಮ್ ಮಾತ್ರ ಬಾರ್ ನಲ್ಲಿ ಪಕ್ಕಾ ಇರ್ತಾನೆ. ಬಾಟಲ್ ಲೆಕ್ಕದಲ್ಲಿ ಎಣ್ಣೆ (ಮದ್ಯಪಾನ) ಇಳಿಸುವ ಪ್ರಥಮ್ ಮತ್ತು ಆತನ ಸ್ನೇಹಿತ ಮಿಕ್ಸ್ (ಮಜಾ ಟಾಕೀಸ್ ಪವನ್) ಮಾತಲ್ಲೇ ಎಲ್ಲರನ್ನ ಮರಳು ಮಾಡಿ, ಬಿಲ್ ದುಡ್ಡನ್ನ ಇನ್ನೊಬ್ಬರ ತಲೆ ಮೇಲೆ ಹಾಕಿ ಎಸ್ಕೇಪ್ ಆಗುವುದೇ ಇವರಿಬ್ಬರ ಜಾಯಮಾನ. ಹಾಗೂ ಪ್ರತಿದಿನದ ಕಾಯಕ.

ಮೋಸ ಮಾಡುವುದು ಯಾಕೆ.?

‘ಸರ್ವ ರೋಗಕ್ಕೂ ಸಾರಾಯಿ ಮದ್ದು’ ಎನ್ನುವುದನ್ನು ನಂಬಿರುವ ಪ್ರಥಮ್, ಪ್ರತಿ ದಿನ ಎಣ್ಣೆ ಹೊಡೆಯುತ್ತಾನೆ. ಅದು ಇನ್ನೊಬ್ಬರ ದುಡ್ಡಲ್ಲಿ. ಇನ್ನೊಬ್ಬರನ್ನ ಯಾಮಾರಿಸಿ ಪ್ರತಿದಿನ ಪ್ರಥಮ್ ಕುಡಿಯೋದು ಯಾಕೆ ಅಂದ್ರೆ, ಅಲ್ಲಿ ಒಂದು ‘ಭಾಷೆ’ ಸಮಸ್ಯೆ ಇದೆ. ಏನು ಆ ‘ಭಾಷೆ’.? ‘ದೇವ್ರಂಥ ಮನುಷ್ಯ’ ಕೊನೆಗೆ ಕುಡಿಯುವುದನ್ನು ಬಿಡ್ತಾನಾ ಇಲ್ವಾ ಅನ್ನೋದು ಬಾಕಿ ಕಥೆ. ಅದನ್ನ ನೀವು ಥಿಯೇಟರ್ ನಲ್ಲೇ ನೋಡಿ…

ಪ್ರಥಮ್ ಆಕ್ಟಿಂಗ್ ಹೇಗಿದೆ.?

‘ದೇವ್ರಂಥ ಮನುಷ್ಯ’ ಸಿನಿಮಾದಲ್ಲಿ ಪ್ರಥಮ್ ಮಾತಿನ ಮಲ್ಲ. ನಿಜ ಜೀವನದಲ್ಲಿ ಪ್ರಥಮ್ ಹೇಗೆ ಮಾತನಾಡುತ್ತಾರೋ, ಖಂಡಿಸುತ್ತಾರೋ… ಸಿನಿಮಾದಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಚಿತ್ರದಲ್ಲಿ ಪ್ರಥಮ್ ಆಕ್ಟ್ ಮಾಡಿದ್ದಾರೆ ಅನ್ನೋದಕ್ಕಿಂತ, ಪ್ರಥಮ್ ನೈಜವಾಗಿ ಕಾಣ್ತಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಪ್ರಥಮ್ ಇನ್ನೂ ಪಳಗಬೇಕು.

ಇಬ್ಬರು ಹೀರೋಯಿನ್ ಗಳ ಅಭಿನಯ.?

‘ದೇವ್ರಂಥ ಮನುಷ್ಯ’ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಗಳಿದ್ದಾರೆ. ಹಾಗಂದ ಮಾತ್ರಕ್ಕೆ ಇಲ್ಲಿ ದೇವ್ರಾಣೆಗೂ ಟ್ರೈಯಾಂಗಲ್ ಲವ್ ಸ್ಟೋರಿ ಇಲ್ಲ. ಆದ್ರೂ, ಪ್ರಥಮ್ ಹಿಂದೆ ಬೀಳುವ ಹುಡುಗಿಯರಾಗಿ ಶ್ರುತಿ ಮತ್ತು ವೈಷ್ಣವಿ ಅಭಿನಯ ಅಚ್ಚುಕಟ್ಟಾಗಿದೆ.

ಗಮನ ಸೆಳೆಯುವ ಸುಚೇಂದ್ರ ಪ್ರಸಾದ್, ತಬಲಾ ನಾಣಿ

‘ದೇವ್ರಂಥ ಮನುಷ್ಯ’ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಪವನ್ ಹಾಗೂ ತಬಲಾ ನಾಣಿ ಗಮನ ಸೆಳೆಯುತ್ತಾರೆ. ಉಳಿದಂತೆ ಸಿನಿಮಾದಲ್ಲಿ ಹೊಸ ಮುಖಗಳೇ ಹೆಚ್ಚಾಗಿವೆ. ಎಣ್ಣೆ ಸಾಂಗ್ ನಲ್ಲಿ ಮಾತ್ರ ‘ಕಿರಿಕ್’ ಕೀರ್ತಿ ಬಾಟಲ್ ಹಿಡಿದು ಸ್ಟೆಪ್ ಹಾಕ್ತಾರೆ.

ಪ್ರಥಮ್ ಗೆ ಹೇಳಿ ಮಾಡಿಸಿದ ಸಿನಿಮಾ ಬಾಯಿ

ತೆಗೆದರೆ ಮೆದುಳಿಗೆ ಕೈಹಾಕುವ ಪ್ರಥಮ್ ಗೆ ‘ದೇವ್ರಂಥ ಮನುಷ್ಯ’ ಹೇಳಿ ಮಾಡಿಸಿದ ಸಿನಿಮಾ. ಇದರಲ್ಲಿ ಬಿಲ್ಡಪ್ ಡೈಲಾಗ್ಸ್ ಇಲ್ಲ. ಪ್ರಥಮ್ ‘ಹೀರೋ’ ಎಂದ ಮಾತ್ರಕ್ಕೆ ಕೇಡಿಗಳನ್ನ ಬಗ್ಗುಬಡಿಯಲ್ಲ. ಇಬ್ಬರು ಹೀರೋಯಿನ್ಸ್ ಇದ್ದಾರೆ ಅಂತ್ಹೇಳಿ ರೋಮ್ಯಾನ್ಸ್ ದೃಶ್ಯಗಳನ್ನಿಟ್ಟಿಲ್ಲ. ಬಾಕಿ ಹೀರೋಗಳಂತೆ ಪ್ರಥಮ್ ಗೆ ಡ್ಯಾನ್ಸ್ ಮಾಡೋಕೆ ಬರಲ್ಲ. ಆದರೂ, ಪ್ರಥಮ್ ಇಮೇಜ್ ಗೆ ತಕ್ಕ ಹಾಗೆ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಕಿರಣ್ ಶೆಟ್ಟಿ.

ಪ್ರಾಸ ಮತ್ತು ಪ್ರಾಸ

ಡೈಲಾಗ್ 1 : ನೀನು ಒಪ್ಪಿಕೊಂಡ್ರೆ ಇತಿಹಾಸ… ಇಲ್ಲ ಅಂದ್ರೆ ವಡೆ ಪಾಯಸ.

ಡೈಲಾಗ್ 2 : ಸಿಂಹಕ್ಕೆ ಸಿಂಹದ್ದೇ ಗತ್ತು… ಬಾಕಿ ಸಾವಿರದ ಎಂಬತ್ತು.

ಡೈಲಾಗ್ 3 : ಅಣ್ಣ ಅವನು ಡಿ.ಜೆ… ಮಾಡ್ತೀನಿ ಅವನಿಗೆ ಪೂಜೆ

ಹೀಗೆ, ಚಿತ್ರದ ಸಂಭಾಷಣೆಯಲ್ಲಿ ಪ್ರಾಸ ಪದಗಳೇ ಹೆಚ್ಚಾಗಿವೆ. ಎಲ್ಲವೂ ಪ್ರಥಮ್ ಶೈಲಿಯಲ್ಲೇ ಇವೆ.

‘ದೇವ್ರಂಥ ಮನುಷ್ಯ’ನ ಕನ್ನಡ ಪ್ರೇಮ

”ಎಲ್ಲಿ ತನಕ ಕನ್ನಡ ಕಡೆಗಣಿಸುತ್ತೇವೋ, ಅಲ್ಲಿ ತನಕ ಕಡೆಯಲ್ಲೇ ಇರ್ತೀವಿ. ಕನ್ನಡವನ್ನ ಕೇವಲವಾಗಿ ಕಾಣೋನು ಕನ್ನಡಿಗನೇ ಅಲ್ಲ” ಎಂಬ ಡೈಲಾಗ್ ಹೊಡೆಯುವ ಪ್ರಥಮ್, ‘ದೇವ್ರಂಥ ಮನುಷ್ಯ’ನಾಗೂ ತಮ್ಮ ಕನ್ನಡ ಪ್ರೇಮ ಮೆರೆದಿದ್ದಾರೆ.

ಮಾಸ್ಟರ್ ಪೀಸ್ ಅಲ್ಲ.!

ಒಂದಂತೂ ಕನ್ಫರ್ಮ್… ‘ದೇವ್ರಂಥ ಮನುಷ್ಯ’ ಸಿನಿಮಾ ಮಾಸ್ಟರ್ ಪೀಸ್ ಅಲ್ಲ. ಆದ್ರೆ, ಈ ಸಿನಿಮಾ ಬೋರ್ ಅಂತೂ ಹೊಡೆಸಲ್ಲ. ಪ್ರಥಮ್ ಮಾತುಗಳನ್ನ ಎಂಜಾಯ್ ಮಾಡುವವರಿಗೆ ಈ ಸಿನಿಮಾ ಖುಷಿ ಕೊಡಬಹುದು. ಪ್ರಥಮ್ ನ ಖಂಡಿಸುವವರಿಗೆ ಈ ಸಿನಿಮಾ ‘ಡೈಜೆಸ್ಟ್ ಆಗದ ಸಿಲಬಸ್’ ಕೂಡ ಆಗಬಹುದು.

ಫೈನಲ್ ಸ್ಟೇಟ್ ಮೆಂಟ್

ಪ್ರದ್ಯೋತನ್ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳು ಕಿವಿಗೆ ಇಂಪಾಗಿವೆ. ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಪ್ರಥಮ್ ನ ಸಹಿಸಿಕೊಂಡವರು ‘ದೇವ್ರಂಥ ಮನುಷ್ಯ’ ಸಿನಿಮಾವನ್ನ ಖಂಡಿತ ಒಮ್ಮೆ ನೋಡಬಹುದು.