ತಿಗಳರಪೇಟೆಯ ಪೀಡೆಸಂದಿಯಿಂದ (ಟೈಗರ್ ಗಲ್ಲಿ) ಶುರುವಾಗುವ ಈ ರಕ್ತಚರಿತ್ರೆಯಲ್ಲಿ ರೌಡಿಸಂ, ಅಮಾಯಕ ಜನರ ಆರ್ತನಾದ, ತಾಯಿ-ಮಗನ ಬಾಂಧವ್ಯ, ಮೂರು ಬಿಟ್ಟಿರುವ ರಾಜಕಾರಣಿಗಳು, ಪೋಲೀಸರ ಅಸಹಾಯಕತೆ,……ಹೀಗೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಇವೆ. ಆದ್ರೆ, ಇದನ್ನ ನಿರ್ದೇಶಕರು ಅತಿರೇಕವಾಗಿ ಹೇಳಿರುವುದು ಪ್ರೇಕ್ಷಕರ ತಾಳ್ಮೆ ಕೆಡಿಸುವಂತೆ ಮಾಡಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ….
Rating: 3.0/5
ಚಿತ್ರ: ಟೈಗರ್ ಗಲ್ಲಿ
ನಿರ್ದೇಶನ: ರವಿ ಶ್ರೀವತ್ಸ
ನಿರ್ಮಾಪಕ: ಯೋಗೇಶ್ ಕುಮಾರ್
ಸಂಗೀತ ನಿರ್ದೇಶನ: ಶ್ರೀಧರ್ ವಿ ಸಂಭ್ರಮ್
ಕಥೆ-ಚಿತ್ರಕಥೆ-ಸಂಭಾಷಣೆ: ಕೆ.ವಿ ರಾಜು
ಕಲಾವಿದರು: ಸತೀಶ್ ನೀನಾಸಂ, ಭಾವನ, ರೋಶಿಣಿ ಪ್ರಕಾಶ್, ಶಿವಮಣಿ, ಯಮುನಾ, ಅಯ್ಯಪ್ಪ, ಗಿರಿರಾಜ್, ಅನಂತವೇಲು, ಪೂಜಾ ಲೋಕೇಶ್ ಮತ್ತು ಇತರರು. ಬಿಡುಗಡೆ: ಅಕ್ಟೋಬರ್ 27, 2017

‘ಟೈಗರ್ ಗಲ್ಲಿ’ಯಲ್ಲಿ ಏನಿದೆ?

ರಕ್ತಸಿಕ್ತವಾದ ‘ಟೈಗರ್ ಗಲ್ಲಿ’ಯಲ್ಲಿ ರೌಡಿ ಹಾಗೂ ರಾಜಕಾರಣಿಗಳನ್ನ ಅತ್ಯಾಚಾರ ಮಾಡಲಾಗಿದೆ. ಹೆಸರಿಗೆ ಇದು ರೌಡಿಸಂ ಕುರಿತ ಸಿನಿಮಾವಾದರೂ, ಅಂತಿಮ ಸಂದೇಶ ಭ್ರಷ್ಟ ರಾಜಕಾರಣಿ ಈ ಸಮಾಜಕ್ಕೆ ಮಾರಕವೆಂದು ಬಿಂಬಿಸಲಾಗಿದೆ. ತಿಗಳರಪೇಟೆಯ ಪೀಡೆಸಂದಿಯಿಂದ (ಟೈಗರ್ ಗಲ್ಲಿ) ಶುರುವಾಗುವ ಈ ಕಥೆಯಲ್ಲಿ ಲೋಕಲ್ ರೌಡಿಸಂ, ಅದಕ್ಕೆ ಬಲಿಯಾಗುವ ಅಮಾಯಕ ಯುವಕ, ತಾಯಿ-ಮಗನ ಆಕ್ರಂದನ, ಮೂರು ಬಿಟ್ಟಿರುವ ರಾಜಕಾರಣಿಗಳು, ಶೌರ್ಯವಿಲ್ಲದ ಪೋಲೀಸರು….ಹೀಗೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾಗಿರುವ ಎಲ್ಲಾ ಅಂಶಗಳಿವೆ.

ಫಸ್ಟ್ ಹಾಫ್ ಬೋರು, ಸೆಕೆಂಡ್ ಹಾಫ್ ಸುಮಾರು

ರೋಚಕತೆಯಿಂದ ಆರಂಭ ಪಡೆಯುವ ಟೈಗರ್ ಗಲ್ಲಿ, ನಂತರ ದಿಕ್ಕು ತಪ್ಪುತ್ತೆ. ರೌಡಿಸಂ ಅಬ್ಬರದಲ್ಲೊಂದು ಅನವಶ್ಯಕ ಪ್ರೇಮಕಥೆ ಬಂದು ಪ್ರೇಕ್ಷಕರು ಕೈಯಲ್ಲಿ ಮೊಬೈಲ್ ಹಿಡಿದುಕೊಳ್ಳುವಂತೆ ಮಾಡುತ್ತೆ. ಹಾಗೋ, ಹೀಗೋ ಈ ಸೆಕ್ಸಿ ಲವ್ ಸ್ಟೋರಿ ನೋಡಿ ಮೊದಲಾರ್ಧ ಮುಗಿಯುತ್ತೆ. ರಿವೇಂಜ್ ಕಥೆಯನ್ನೊಳಗೊಂಡು ಸೆಕೆಂಡ್ ಹಾಫ್ ಥ್ರಿಲ್ಲಿಂಗ್ ಆಗಿದ್ದರೂ ಹೆಚ್ಚೇನೂ ಮೋಡಿ ಮಾಡುವುದಿಲ್ಲ. ಮೊದಲಾರ್ಧ ನೋಡಿದ್ದ ಪ್ರೇಕ್ಷಕರಿಗೆ ಕ್ಲೈಮ್ಯಾಕ್ಸ್ ಸಮಾಧಾನ ನೀಡುತ್ತೆ ಎನ್ನಬಹುದು ಅಷ್ಟೇ.

ಕಥೆ ಬಗ್ಗೆ ಹೇಳುವುದಾದರೇ

ಒಂದುಕಡೆ ತಾಯಿ (ಯಮುನಾ) ಮತ್ತು ಮಗನ (ಸತೀಶ್) ಸುಖಕರ ಜೀವನ. ಮತ್ತೊಂದೆಡೆ ಮುಖ್ಯಮಂತ್ರಿ ಮತ್ತು ಅವರ ಮಕ್ಕಳು (ಬಿ.ಎಂ ಗಿರಿರಾಜ್, ಶಿವಮಣಿ), ಹಾಗೂ ರೌಡಿ ಜಯರಾಜ್ (ಅಯ್ಯಪ್ಪ) ಅವರ ರಾಜಕಾರಣ. ಅಚಾನಕ್ ಆಗಿ ತಾಯಿ ಮಗನ ಮೇಲೆ ಕಣ್ಣು ಹಾಕುವ ರೌಡಿ ಜಯರಾಜ್ ಅವರಿಬ್ಬರನ್ನ ಕೊಲ್ಲುವ ಪಣ ತೊಡುತ್ತಾನೆ. ಇಲ್ಲಿಂದ ಆರಂಭವಾಗುವ ಕಥೆಯಲ್ಲಿ ಹಲವು ತಿರುವು ಸಿಗುತ್ತೆ. ನಿರೀಕ್ಷೆ ಮಾಡಲಾಗದ ಟ್ವಿಸ್ಟ್ ಸಿಗುತ್ತೆ. ಅಬ್ಬರಿಸಿ ಬೊಬ್ಬಿರಿಯುವ ಕೊನೆ ಸಿಗುತ್ತೆ.

ಸತೀಶ್ ಅಭಿನಯ ಹೇಗಿದೆ?

ಸತೀಶ್ ನೀನಾಸಂ ಅವರಿಗೆ ಈ ಸಿನಿಮಾ ಮಾಸ್ ಇಮೇಜ್ ನೀಡಿದೆ. ಅದನ್ನ ಉತ್ತಮವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಸತೀಶ್. ಆದ್ರೆ, ಬೆಂಗಳೂರು ರೌಡಿಸಂಗೆ ಬೇಕಾಗಿದ್ದ ಮ್ಯಾನರಿಸಂ ಸತೀಶ್ ಅವರಿಂದ ತೆಗಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಸತೀಶ್ ಅವರು ಎರಡು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ಅದು ಚಿತ್ರದಲ್ಲಿ ನೋಡಿ ಖುಷಿ ಪಡಬಹುದು.

ನಾಯಕಿಯರು ಪಾತ್ರ

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಭಾವನಾ ಅವರದ್ದು ಬೋಲ್ಡ್ ಅಂಡ್ ಸೆಕ್ಸಿ ಪಾತ್ರ. ಆದ್ರೆ, ಈ ಪಾತ್ರದಲ್ಲಿ ಭಾವನಾ ಇಷ್ಟವಾಗುವುದಕ್ಕಿಂತ ಕಿರಿಕಿರಿ ಆಗ್ತಾರೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರೋಶಿನಿ ಪ್ರಕಾಶ್ ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಹೀರೋ ರೇಂಜ್ ನಲ್ಲಿ ಉದ್ದುದ್ದ ಡೈಲಾಗ್ ಹೊಡೆದು ಬಿಲ್ಡಪ್ ಹೆಚ್ಚಿಸಿಕೊಳ್ತಾರೆ.

ನಿರ್ದೇಶನ ಹೇಗಿದೆ?

ಒಂದು ಸಾಮಾನ್ಯ ಕಥೆಯನ್ನ ಅತಿ ವೈಭವೀಕರಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ. ರೌಡಿಸಂನಲ್ಲಿರಬೇಕಾದ ರೋಚಕತೆ, ಕ್ರೌರ್ಯತೆ, ಕುತೂಹಲ ಕಾಪಾಡುವಲ್ಲಿ ಮತ್ತಷ್ಟು ಪ್ರಯತ್ನ ಪಡಬೇಕಿತ್ತು. ಬರಿ ಸಂಭಾಷಣೆ ಮೂಲಕವೇ ಅರ್ಧ ಸಿನಿಮಾ ಮುಗಿಸಿದ್ದಾರೆ. ಡೈಲಾಗ್ ಗಳೇ ಚಿತ್ರದಲ್ಲಿ ಹೆಚ್ಚು ಕೆಲಸ ಮಾಡಿದೆ.

ಉದ್ದುದ್ದು ಸಂಭಾಷಣೆಯಿಂದ ಕಿರಿಕಿರಿ

‘ಟೈಗರ್ ಗಲ್ಲಿ’ಯ ಬಹುದೊಡ್ಡ ಆಕರ್ಷಣೆ ಅಂದ್ರೆ ಡೈಲಾಗ್. ಚಿತ್ರದಲ್ಲಿ ಸಂಭಾಷಣೆ ನೇರವಾಗಿ ಮತ್ತು ನೈಜವಾಗಿದೆ. ರೌಡಿಗಳು ಬಳಸುವ ಲೋಕಲ್ ಭಾಷೆ ಇಲ್ಲಿದೆ. ಇದು ಕಥೆಗೆ ಪೂರಕ. ಆದ್ರೆ, ಉದ್ದುದ್ದು ಡೈಲಾಗ್ ಗಳು ಪ್ರೇಕ್ಷಕರಿಗೆ ಕಿರಿ ಕಿರಿ ಉಂಟು ಮಾಡುತ್ತೆ. ಅದರಲ್ಲೂ, ಕೊನೆಯ ಹದಿನೈದು ನಿಮಿಷ ನಾಯಕ ಸತೀಶ್ ಬಾಯಿಂದ ಬರುವ ಡೈಲಾಗ್ ಗಳು ಅರ್ಥಪೂರ್ಣವಾಗಿದ್ದರೂ, ಪ್ರೇಕ್ಷಕರ ಕಿವಿಗೆ ಅದು ಅರ್ಥವಾಗದೇ ಇರುವುದು ಬೇಸರದ ಸಂಗತಿ. ಸತೀಶ್ ಮಾತ್ರವಲ್ಲ, ರೋಶಿನಿ, ಶಿವಮಣಿ, ಪೂಜಾ ಲೋಕೇಶ್ ಅವರು ಕೂಡ ಉದ್ದುದ್ದ ಡೈಲಾಗ್ ಮೂಲಕ ಗಮನ ಸೆಳೆಯುತ್ತಾರೆ.

ಯಾವ ಕಲಾವಿದರ ಅಭಿನಯ ಹೇಗಿದೆ?

ಚಿತ್ರದಲ್ಲಿ ದೊಡ್ಡ ತಾರಬಳಗವೇ ಇದೆ. ಮುಖ್ಯಮಂತ್ರಿ ಪಾತ್ರದಲ್ಲಿ ನಿರ್ದೇಶಕ ಗಿರಿರಾಜ್ ಗಮನಾರ್ಹ ಅಭಿನಯ. ವಿಲನ್ ಪಾತ್ರದಲ್ಲಿ ನಿರ್ದೇಶಕ ಶಿವಮಣಿ ಮತ್ತು ಅಯ್ಯಪ್ಪಗೆ ಫುಲ್ ಮಾರ್ಕ್ಸ್. ನ್ಯಾಯಾಧೀಶ ಪಾತ್ರದಲ್ಲಿ ಪೂಜಾ ಲೋಕೇಶ್ ಮಿಂಚಿದ್ದಾರೆ. ತಾಯಿ ಪಾತ್ರದಲ್ಲಿ ಯಮುನಾ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಕೊನೆಯ ಮಾತು

‘ಟೈಗರ್ ಗಲ್ಲಿ’ ಪಕ್ಕಾ ಮಾಸ್ ಸಿನಿಮಾ. ಎಲ್ಲ ಪಾತ್ರಗಳು ವಿಶೇಷವಾಗಿದೆ. ನಾಯಕನಟರಂತೆ ಈ ಚಿತ್ರದಲ್ಲಿ ನಟಿಯರು ಕೂಡ ಘರ್ಜಿಸಿರುವುದು ವಿಶೇಷ. ಮನರಂಜನೆ ಇದೆ, ಆದ್ರೆ ತಾಳ್ಮೆ ಇರಬೇಕು ಅಷ್ಟೇ. ಡೆಡ್ಲಿ ರವಿ ಶ್ರೀವತ್ಸ ಅವರ ಮತ್ತೊಂದು ಡೆಡ್ಲಿ ಸಿನಿಮಾ ಇದು. ಹೆಚ್ಚಾಗಿ ನಿರೀಕ್ಷೆ ಬೇಡ.