‘ಹಣದಿಂದ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ’ ಎಂಬ ಮಾತಿದೆ. ಆ ಮಾತಿನ ಹಾಗೆ ‘ಹುಲಿರಾಯ’ ಚಿತ್ರದ ಕಥೆ ಇದೆ. ಚಂದದ ಕಥೆ, ಅಷ್ಟೆ ಚಂದದ ನಿರೂಪಣೆ ಸೇರಿಕೊಂಡಿರುವ ‘ಹುಲಿರಾಯ’ ಸಭ್ಯ ಸಿನಿಮಾ.

Rating: 3.5/5
ಚಿತ್ರ: ಹುಲಿರಾಯ
ನಿರ್ಮಾಣ: ಕೆ.ಎನ್.ನಾಗೇಶ್ ಕೊಗಿಲು
ನಿರ್ದೇಶನ: ಅರವಿಂದ್ ಕೌಶಿಕ್
ಸಂಗೀತ: ಅರ್ಜುನ್ ರಾಮು
ಛಾಯಾಗ್ರಹಣ: ರವೀ
ತಾರಾಗಣ: ಬಾಲು ನಾಗೇಂದ್ರ, ದಿವ್ಯ, ಚಿರಶ್ರಿ ಅಂಚನ್, ಮತ್ತಿತರರು.
ಬಿಡುಗಡೆ: ಅಕ್ಟೋಬರ್ 6

ಕಾಡಿನ ಹುಲಿ ಕಥೆ

ಒಂದು ದೊಡ್ಡ ಕಾಡು. ಅಲ್ಲಿಯೇ ಹುಟ್ಟಿ ಬೆಳೆಯುವ ನಾಯಕ ಸುರೇಶ(ಬಾಲು ನಾಗೇಂದ್ರ)ನಿಗೆ ಆ ಅಡವಿಯೇ ಎಲ್ಲ. ಅಲ್ಲಿ ಹುಲಿ ಆಗಿ ಮೆರೆಯುತ್ತಿದ್ದ ಆತ ಮುಂದೆ ದುಡ್ಡು ಮಾಡುವುದಕ್ಕೆ ಸಿಟಿಗೆ ಬರುತ್ತಾನೆ. ತನ್ನ ತಾಯಿ, ತಾನು ಪ್ರೀತಿಸಿದ ಹುಡುಗಿ ಎಲ್ಲರ ಮಾತಿನಿಂದ ದುಡ್ಡು ಮಾಡುವ ನಿರ್ಧಾರ ಮಾಡುತ್ತಾನೆ. ಕಾಡಿನಲ್ಲಿ ಮರ, ಗಿಡ, ಬೆಟ್ಟ, ಗುಡ್ಡ, ನದಿ ಜೊತೆ ಬದುಕಿದ್ದ ಈ ಹುಲಿ, ನಾಡಿನಲ್ಲಿ ಹೇಗೆ ಬದುಕುತ್ತದೆ? ದುಡ್ಡು ಮಾಡುವುದಕ್ಕೆ ನಿಂತ ಹುಲಿ ಏನ್ನೆಲ್ಲ ಮಾಡುತ್ತದೆ? ಎನ್ನುವುದು ಸಿನಿಮಾದ ಕಥೆ.

ಹತ್ತಿರ ಆಗುವ ಸಿನಿಮಾ

ಉರು ಬಿಟ್ಟು ಬಂದ ಯುವಕರಿಗೆ ಸಿನಿಮಾದ ಕೆಲ ದೃಶ್ಯಗಳು ತುಂಬ ಹತ್ತಿರವಾಗುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬ ‘ಹುಲಿರಾಯ’ ಇರುತ್ತಾನೆ ಎನ್ನುವ ನಿರ್ದೇಶಕರು, ನಮ್ಮ ಸುತ್ತ ಮುತ್ತಲಿನ ಕಥೆಗೆ ಒಂದು ಒಳ್ಳೆಯ ರೂಪ ಕೊಟ್ಟು ಹುಲಿರಾಯನನ್ನು ಸೃಷ್ಟಿ ಮಾಡಿದ್ದಾರೆ.

‘ಹುಲಿರಾಯ’ನ ಘರ್ಜನೆ – ಜಿಂಕೆಯ ಮೌನ

ನಟನೆಗೆ ಬಂದರೆ ‘ಹುಲಿರಾಯ’ ಹೆಸರಿಗೆ ತಕ್ಕಂತೆ ಘರ್ಜನೆ ಮಾಡಿದ್ದಾನೆ. ಸುರೇಶ ಹಾಗೂ ಹುಲಿರಾಯ ಪಾತ್ರದಲ್ಲಿ ನಟಿಸಿರುವ ನಾಯಕ ಬಾಲು ನಾಗೇಂದ್ರ ಚಿತ್ರದ ಆರಂಭದಿಂದ ಹಿಡಿದು ಅಂತ್ಯದವರೆಗೂ ಪರದೆ ಮೇಲೆ ಆವರಿಸಿಕೊಂಡಿದ್ದಾರೆ. ಈ ಹುಲಿಗೆ ಇಬ್ಬರು ಜಿಂಕೆಯಾಗಿ ದಿವ್ಯ ಮತ್ತು ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದಾರೆ. ಚಿರಶ್ರೀ ಫಸ್ಟ್ ಹಾಫ್ ನಲ್ಲಿ ಬಂದರೆ, ದಿವ್ಯ ಸೆಕೆಂಡ್ ಹಾಫ್ ನಲ್ಲಿ ಬರುತ್ತಾರೆ.

ಅಚ್ಚುಕಟ್ಟಾದ ನಿರ್ದೇಶನ

ನಿರ್ದೇಶಕ ಅರವಿಂದ್ ಕೌಶಿಕ್ ಒಂದು ಅಚ್ಚುಕಟ್ಟಾದ ಸಿನಿಮಾ ಮಾಡಿದ್ದಾರೆ. ಸಿನಿಮಾವನ್ನು ಕಮರ್ಶಿಯಲ್ ಆಗಿ ತೋರಿಸಬೇಕು ಎನ್ನುವ ಆತುರದಲ್ಲಿ ಕಥೆಗೆ ಬೇಕಾಗದ ದೃಶ್ಯಗಳನ್ನು ತಂದಿಲ್ಲ. ತಾವು ಏನು ಹೇಳಬೇಕೆಂದುಕೊಂಡಿದ್ದರೋ ಅದನ್ನು ನೀಟ್ ಆಗಿ ನಿರ್ದೇಶಕರು ಹೇಳಿದ್ದಾರೆ.

ಮ್ಯೂಸಿಕ್, ಕ್ಯಾಮರಾ

ಸಿನಿಮಾದ ಹೈಲೈಟ್ ಅಂದರೆ ಮ್ಯೂಸಿಕ್ ಹಾಗೂ ಕ್ಯಾಮರಾ. ಸಿನಿಮಾದ ಕಥೆಯ ಜೊತೆ ಜೊತೆಗೆ ಬರುವ ಹಾಡುಗಳು ಕೇಳಿದಾಗ ಹೊಸ ಅನುಭವವನ್ನು ನೀಡುತ್ತದೆ. ಕ್ಯಾಮರಾ ಕೆಲಸ ಚಿತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ.

ಕ್ಲೈಮಾಕ್ಸ್ ನಲ್ಲಿ ಜೀವಾಳ

ಮೊದಮೊದಲು ತಮಾಷೆ ಇರುವ ಚಿತ್ರ ಕೊನೆಯ ದೃಶ್ಯದಲ್ಲಿ ಜೀವನದ ಸತ್ಯವನ್ನು ಬಿಚ್ಚಿಡುತ್ತದೆ. ”ದುಡ್ಡು ಶಾಶ್ವತ ಅಲ್ಲ, ಸತ್ತಾಗ ಬರಿ ಕೈನಲ್ಲಿ ಹೋಗಬೇಕು” ಎನ್ನುವ ಕಠೋರ ಸತ್ಯವನ್ನು ಸಿನಿಮಾದ ಕೊನೆಯ ದೃಶ್ಯದಲ್ಲಿ ತೋರಿಸಿದ್ದಾರೆ.

ನಿಜಕ್ಕೂ ವಿಭಿನ್ನ

ಇಲ್ಲಿ ಫೈಟ್ ಇಲ್ಲ..ಬಿಲ್ಡಪ್ ಇಲ್ಲ..ರೊಮ್ಯಾನ್ಸ್ ಇಲ್ಲ.. ಫಾರಿನ್ ಲೋಕೇಷನ್ ಅಂತೂ ಇಲ್ಲವೇ ಇಲ್ಲ.. ಆದರೂ ಸಿನಿಮಾ ಇಷ್ಟ ಆಗುತ್ತದೆ. ಇದು ಬಾಯಿ ಮಾತಿಗೆ ವಿಭಿನ್ನ ಎನ್ನುವ ಸಿನಿಮಾ ಅಲ್ಲ. ನಿಜಕ್ಕೂ ವಿಭಿನ್ನ ಸಿನಿಮಾ. ಇಡೀ ಸಿನಿಮಾ ಸಖತ್ ಮಜಾವಾಗಿದೆ. ನೀವು ನೋಡಿ ಇಷ್ಟ ಆಗುತ್ತದೆ.