24 1511520538 1reviewcopy

ಇಮ್ರಾನ್ ಸರ್ದಾರಿಯಾ ನಿರ್ದೇಶನದ ‘ಉಪ್ಪು ಹುಳಿ ಖಾರ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರದ ‘ಫಾಸ್ಟ್ ರಿವ್ಯೂ’ ನೀಡಲಾಗಿದೆ. ಮುಂದೆ ಓದಿ….

Rating: 3.0/5
ಸಿನಿಮಾ : ಉಪ್ಪು ಹುಳಿ ಖಾರ
ನಿರ್ಮಾಣ: ಎಂ.ರಮೇಶ್
ನಿರ್ದೇಶನ: ಇಮ್ರಾನ್ ಸರ್ದಾರಿಯಾ
ಸಂಗೀತ: ಜುಡಾ ಸ್ಯಾಂಡಿ, ಪ್ರಜ್ವಲ್ ಪೈ, ಕಿಶೋರ್ ಅಕ್ಸಾ
ಸಂಕಲನ: ದೀಪು ಎಸ್ ಕುಮಾರ್
ಛಾಯಾಗ್ರಹಣ : ನಿರಂಜನ್ ಬಾಬು
ತಾರಾಗಣ: ಮಾಲಾಶ್ರೀ, ಶರತ್, ಶಶಿ ದೇವರಾಜ್, ಧನು, ಅನುಶ್ರೀ, ಜಯಶ್ರೀ ಮತ್ತಿತರರು.
ಬಿಡುಗಡೆ: ನವೆಂಬರ್ 24, 2017

ಚಿತ್ರದ ಅಸಲಿ ಕಥೆ: ಸಸ್ಪೆನ್ಸ್ ನೊಂದಿಗೆ ಆರಂಭವಾಗುವ ‘ಉಪ್ಪು ಹುಳಿ ಖಾರ’, ಮಧ್ಯಂತರವರೆಗೂ ಪ್ರೇಕ್ಷಕರನ್ನ ಪೂರ್ತಿಯಾಗಿ ರಂಜಿಸುತ್ತೆ. ಲವ್, ಆಕ್ಷನ್, ಕಾಮಿಡಿ, ಮೆಸೆಜ್ ಎಲ್ಲವೂ ಸೇರಿದ ಮಿಕ್ಸ್ ಮಸಾಲ ಪ್ಯಾಕೇಜ್ ಇದು. ದ್ವಿತೀಯಾರ್ಧದಲ್ಲಿ ಸಸ್ಪೆನ್ಸ್ ಗೆ ಟ್ವಿಸ್ಟ್ ಕೊಟ್ಟು, ಸಮಾಜಕ್ಕೊಂದು ಗಟ್ಟಿಯಾದ ಸಂದೇಶವಿಟ್ಟು ಮನರಂಜನೆಯಾಗಿ ಪ್ರೆಸೆಂಟ್ ಮಾಡಲಾಗಿದೆ. ಮಾಲಾಶ್ರೀ ಸೇರಿದಂತೆ ಮೂವರು ನಾಯಕ ನಟರು ಮತ್ತು ನಾಯಕಿಯರ ಅಭಿನಯ ಎಲ್ಲೂ ಬೋರ್ ಮಾಡದೆ ಇಷ್ಟವಾಗುತ್ತೆ.

ಮೈನಸ್ ಪಾಯಿಂಟ್: ಕೋರ್ಟ್ ನಲ್ಲಿ ನಡೆಯುವ ವಾದ-ವಿವಾದ ಟಿವಿಯಲ್ಲಿ ಪ್ರಸಾರವಾಗುವುದು ಲಾಜಿಕ್ ಗೆ ತುಂಬ ದೂರವಾದದು. ಸೆಲೆಬ್ರಿಟಿ ಆಗ್ಬೇಕು ಅಂದ್ರೆ ತಪ್ಪು ಮಾಡ್ಬೇಕು ಎಂಬ ತಪ್ಪು ಕಲ್ಪನೆ ಕಥೆಯಲ್ಲಿದೆ. ಕೋರ್ಟ್ ಸನ್ನಿವೇಶದಲ್ಲಿ ಹೇಳುವ ಡೈಲಾಗ್ ಗಳು ಸಾಮಾನ್ಯವೆನಿಸುತ್ತೆ. ಆರಂಭದಲ್ಲಿದ್ದ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್ ನಲ್ಲಿ ಕಾಣಲಿಲ್ಲ.

ನೋಡಬಹುದಾ? ಇಲ್ವಾ? : ‘ಉಪ್ಪು ಹುಳಿ ಖಾರ’ ಈ ಮೂರು ಇದ್ರೆ ಅಡುಗೆ ಸೂಪರ್ ಅಂತಾರೆ. ಈ ಸಿನಿಮಾ ಎಂಬ ‘ಉಪ್ಪು ಹುಳಿ ಖಾರ’ದಲ್ಲಿ ಸೂಪರ್ ಅನಿಸದೇ ಹೋದ್ರು, ಚೆನ್ನಾಗಿಲ್ಲ ಎಂದು ಮಾತ್ರ ಅನಿಸಲ್ಲ. ರುಚಿ ಇಷ್ಟವಾಗುತ್ತೆ. ಆರಾಮಾಗಿ ಕೂತು ಸಿನಿಮಾ ನೋಡಬಹುದು.

ಕಥಾ ಹಂದರ

ಬ್ಯಾಂಕ್ ದರೋಡೆ ಆಗುತ್ತೆ. ಈ ದರೋಡೆ ಮಾಡಿದವರನ್ನ ಹಿಡಿಯಲು ಎಸಿಪಿ ದೇವಿ (ಮಾಲಾಶ್ರೀ) ಎಂಟ್ರಿ ಕೊಡ್ತಾರೆ. ದರೋಡೆಕೋರರ ಬಗ್ಗೆ ಸುಳಿವು ನೀಡುವ ಅನಾಮಿಕ ವ್ಯಕ್ತಿಯ ಸಹಾಯದಿಂದ ಮೂವರನ್ನ ಪೊಲೀಸರು ಬಂದಿಸುತ್ತಾರೆ. ಈ ಮೂವರೇ ಚಿತ್ರದ ನಾಯಕರು. ನಿಜಕ್ಕೂ ಈ ಮೂವರು ದರೋಡೆ ಮಾಡಿದ್ರಾ? ಅಥವಾ ಅಚಾನಕ್ ಆಗಿ ಇವರು ಸಿಕ್ಕಿಬಿದ್ರಾ ಎಂಬದೇ ‘ಉಪ್ಪು ಹುಳಿ ಖಾರ’ದ ಕಥೆ.

ಮೊದಲಾರ್ಧ

ಮೂವರು ನಾಯಕರಿಗೂ ಮೂರು ವಿಭಿನ್ನ ಕಥೆ. ಪೋಲೀಸ್ ಆಗಬೇಕೆಂದು ಒಬ್ಬರು (ಶರತ್), ಡಾಕ್ಟರ್ ಆಗಬೇಕೆಂದು ಮತ್ತೊಬ್ಬರು (ಶಶಿ), ವಿದೇಶಕ್ಕೆ ಹೋಗಬೇಕೆಂದು ಇನ್ನೊಬ್ಬರು (ಧನು). ಈ ಮೂವರಿಗೆ ಮೂವರು ನಾಯಕಿಯರು. ಅನುಶ್ರೀ, ಜಯಶ್ರೀ ಮತ್ತು ವಿದೇಶಿ ಹುಡುಗಿಯೊಬ್ಬಳು. ಈ ಮೂರು ಜೋಡಿಗಳ ಲವ್ ಸ್ಟೋರಿ ಜೊತೆಗೆ ಮೊದಲಾರ್ಧ ಮುಗಿಯುತ್ತೆ. ಯಾವುದೇ ಬೋರ್ ಇಲ್ಲದೇ, ಮನರಂಜನೆಯಿಂದ ಫಸ್ಟ್ ಹಾಫ್ ಕೊನೆಯಾಗುತ್ತೆ.

ಸೆಕೆಂಡ್ ಹಾಫ್

ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಬ್ಯಾಂಕ್ ದರೋಡೆ ಕಥೆಗೆ ಟ್ವಿಸ್ಟ್ ಸಿಗುತ್ತೆ. ಹಾಗೆ, ಈ ಮೂರು ಕಥಾನಾಯಕರ ಜೀವನಕ್ಕೂ ತಿರುವು ಸಿಗುತ್ತೆ. ಅದೇನು ಅಂತ ಚಿತ್ರದಲ್ಲಿ ನೋಡಿ ಎಂಜಾಯ್ ಮಾಡಬೇಕಿದೆ.

ಕಲಾವಿದರ ಅಭಿನಯದ

ಪೋಲಿಸ್ ಆಗಬೇಕೆಂಬ ಯುವಕನ ಪಾತ್ರದಲ್ಲಿ ಶರತ್ ಹೆಚ್ಚು ಇಷ್ಟವಾಗ್ತಾರೆ. ಡಾಕ್ಟರ್ ಆಗಬೇಕೆಂಬ ಯುವಕನ ಪಾತ್ರದಲ್ಲಿ ಶಶಿ, ಹಾಗೂ ಲೋಕಲ್ ಹುಡುಗನಾಗಿ ಧನು ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ಅನುಶ್ರೀ ಮತ್ತು ಜಯಶ್ರೀ ಕೂಡ ಉತ್ತಮ ಸಾಥ್ ನೀಡಿದ್ದಾರೆ.

ಮಾಲಾಶ್ರೀ ‘ಪವರ್’

ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಮಾಲಾಶ್ರಿ ಈ ಚಿತ್ರದ ಮುಖ್ಯ ಆಕರ್ಷಣೆ. ಎಂದಿನಂತೆ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿರುವ ಮಾಲಾಶ್ರೀ ಉತ್ತರ ಕನ್ನಡ ಶೈಲಿಯ ಮಾತಿನ ಮೂಲಕ ಗಮನ ಸೆಳೆಯುತ್ತಾರೆ. ಇನ್ನು ಹಾಡೊಂದಲ್ಲಿ ಹೆಜ್ಜೆ ಹಾಕಿರುವ ರಾಗಿಣಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತಾರೆ.

ನಿರ್ದೇಶನ ಹೇಗಿದೆ

ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರ ನಿರ್ದೇಶನ ಅಚ್ಚುಕಟ್ಟಾಗಿದೆ. ಯಾವುದೇ ಗೊಂದಲ, ಅತಿರೇಕವೆನಿಸದೆ ಸರಳವಾಗಿ ಸಿನಿಮಾ ಮಾಡಿದ್ದಾರೆ. ಆದ್ರೆ, ಕಥೆ ಮತ್ತು ಕಾನ್ಸೆಪ್ಟ್ ನಲ್ಲಿ ಹೊಸತನವೇನು ಇಲ್ಲ. ನಿರುದ್ಯೋಗ, ಲಂಚ, ನೋಟ್ ಬ್ಯಾನ್ ಈ ಅಂಶವನ್ನಿಟ್ಟು ಮನರಂಜನೆ ಮೂಲಕ ಸಮಾಜಕ್ಕೊಂದು ಸಂದೇಶ ನೀಡಿದ್ದಾರೆ. ಜುಡಾ ಸ್ಯಾಂಡಿ, ಪ್ರಜ್ವಲ್ ಪೈ ಮತ್ತು ಕಿಶೋರ್ ಅಕ್ಸ ಅವರ ಸಂಗೀತ ಹಾಗೂ ನಿರಂಜನ್ ಬಾಬು ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.