ಕಳೆದ ಕೆಲವು ತಿಂಗಳಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಮಧುರ್ ಭಂಡಾರ್ಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಇಂದು ಸರ್ಕಾರ್’ ಇಂದು ಬಿಡುಗಡೆ ಆಗಿದೆ. 1975-1977 ರ ಅವಧಿಯ ತುರ್ತು ಪರಿಸ್ಥಿತಿ ಆಧರಿತ ‘ಇಂದು ಸರ್ಕಾರ್’ ಚಿತ್ರದ ಸಂಪೂರ್ಣ ವಿಮರ್ಶೆ ಈ ಕೆಳಗಿನಂತಿದೆ ಓದಿರಿ.

ಚಿತ್ರ; ‘ಇಂದು ಸರ್ಕಾರ್’ ನಿರ್ದೇಶನ: ಮಧುರ್ ಭಂಡಾರ್ಕರ್ ನಿರ್ಮಾಣ: ಭರತ್ ಶಾಹ್ ತಾರಾಬಳಗ: ಕ್ರಿತಿ ಕುಲ್ಹರಿ, ನೀಲ್ ನಿತಿನ್ ಮುಕೇಶ್, ಸುಪ್ರಿಯಾ ವಿನೋದ್, ಅನುಪಮ್ ಖೇರ್, ಟೊಟಾ ರಾಯ್ ಚೌಧರಿ ಮತ್ತು ಇತರರು ಬಿಡುಗಡೆ: ಜುಲೈ 28, 2017

ಚಿತ್ರಕಥೆ
ಇಂದು ಎಂಬಾಕೆ ನವೀನ್ ಸರ್ಕಾರ್ ಎಂಬ ಸರ್ಕಾರಿ ನೌಕರನ್ನು ಮದುವೆ ಆಗಿ ಗೃಹಿಣಿ ಆಗುತ್ತಾಳೆ. ಕೆಲವು ದಿನಗಳ ನಂತರ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆಗುತ್ತದೆ. ಪರಿಣಾಮ ಪತ್ರಿಕೆಗಳ ಮೇಲೆ ಮಾತ್ರವಲ್ಲದೇ ಕಿಶೋರ್ ಎಂಬ ಗಾಯಕನು ರೇಡಿಯೋದಲ್ಲಿ ಹಾಡದಂತೆ ಬ್ಯಾನ್ ಮಾಡಲಾಗುತ್ತದೆ. ನಾಶಗೊಂಡ ದೆಹಲಿಯ ಟರ್ಕ್‌ಮ್ಯಾನ್ ಗೇಟ್ ಬಳಿ ಎರಡು ಮಕ್ಕಳನ್ನು ಆ ಸಮಯದಲ್ಲಿ ರಕ್ಷಿಸಿ ನಿಲ್ಲುವ ಇಂದು, ಅವರ ಪೋಷಕರಿಗಾಗಿ ಹುಡುಕಾಟ ನಡೆಸಿದಾಗ ನೆಕ್ಸಲೈಟ್ ಎಂದು ಪೊಲೀಸರಿಂದ ಕೊಲ್ಲಲ್ಪಟ್ಟಿರುವುದು ತಿಳಿಯುತ್ತದೆ.

ಇಂದು ರಕ್ಷಿಸಿದ ಆ ಮಕ್ಕಳಿಗೆ ಆಕೆಯ ಪತಿ ಆಶ್ರಯ ನೀಡಲು ತಿರಸ್ಕರಿಸುತ್ತಾನೆ. ಇದರಿಂದ ಇಂದು ಮತ್ತು ಪತಿ ನಡುವೆ ಜಗಳವಾಗುತ್ತದೆ. ನಂತರ ನವೀನ್ ಇಂದುಗೆ ಮನೆ ಬೇಕೋ? ಅಥವಾ ಆ ಎರಡು ಮಕ್ಕಳು ಬೇಕೋ? ಎಂಬ ಆಯ್ಕೆಗಳನ್ನು ಮುಂದಿಡುತ್ತಾನೆ. ಆಗ ಇಂದು ಆಯ್ಕೆ ಯಾವುದು? ಆಕೆಯ ಹೋರಾಟದ ಸಂಗತಿ ಏನು? ಎಂಬುದು ಕುತೂಹಲ.

ಇಂದು ಪಾತ್ರವೇ ಚಿತ್ರದ ಪಿಲ್ಲರ್
‘ಇಂದು ಸರ್ಕಾರ್’ ಚಿತ್ರ ಸಂಪೂರ್ಣವಾಗಿ ಇಂದು ಪಾತ್ರದ ಮೇಲೆ ಆಧಾರಿತವಾಗಿದ್ದು, ತುರ್ತು ಪರಿಸ್ಥಿತಿ ಸಮಯದಲ್ಲಿ ಸಹನೆ ಕಳೆದುಕೊಂಡ ಸಾಮಾನ್ಯ ಮಹಿಳೆ ಇಂದು, ವ್ಯವಸ್ಥೆಯ ವಿರುದ್ಧ ಹೋರಾಡುವುದರ ಮೇಲೆ ಫೋಕಸ್ ಮಾಡಲಾಗಿದೆ. ಇಂದು ಪಾತ್ರದಲ್ಲಿ ಕ್ರಿತಿ ಕುಲ್ಹರಿ ಅಭಿನಯಕ್ಕೆ ಫುಲ್ ಮಾರ್ಕ್ ನೀಡಬಹುದು. ಸಂಜಯ್ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನೀಲ್ ನಿತಿನ್ ಮುಖೇಶ್ ರವರ ಪಾತ್ರ ಇಂಟರೆಸ್ಟಿಂಗ್ ಆಗಿದೆ. ಆದರೆ ಒಮ್ಮೆಯೂ ಅವರ ಹೆಸರನ್ನೂ ಉದ್ಘರಿಸದೇ ಚೀಫ್ ಎಂದೇ ಬಳಸಲಾಗಿದೆ. ಇತರರ ಪಾತ್ರ ಅಚ್ಚುಕಟ್ಟಾಗಿದೆ. ಚಿತ್ರದಲ್ಲಿ ಹೆಚ್ಚು ಪವರ್ ಫುಲ್ ಡೈಲಾಗ್‌ ಗಳು ಇವೆ.

ತುರ್ತು ಪರಿಸ್ಥಿತಿ ಬಗ್ಗೆ ಓದಿರದವರು ಚಿತ್ರ ನೋಡಬಹುದು
ನಿರ್ದೇಶಕ ಮಧುರ್ ಭಂಡಾರ್ಕರ್ ತಮ್ಮ ಈ ಹಿಂದಿನ ‘ಪೇಜ್ 3’, ‘ಟ್ರ್ಯಾಫಿಕ್ ಸಿಗ್ನಲ್’ ಮತ್ತು ‘ಚಾಂದಿನಿ ಬಾರ್’ ಚಿತ್ರಗಳಂತೆ ನಿರೀಕ್ಷೆಯಂತೆಯೇ ‘ಇಂದು ಸರ್ಕಾರ್’ ಚಿತ್ರವನ್ನು ತೆರೆ ಮೇಲೆ ತಂದಿದ್ದಾರೆ. ಇಂದಿನ ಯುವಕರು ಏನಾದರು ತುರ್ತುಪರಿಸ್ಥಿತಿ ಬಗ್ಗೆ ಓದಿಲ್ಲ, ತಿಳಿದಿಲ್ಲ ಎಂದಲ್ಲಿ ಈ ಚಿತ್ರ ಅಂತಹವರಿಗೆ ಅಧ್ಯಯನ ವಸ್ತು ಎಂದರೇ ತಪ್ಪಾಗಲಾರದು. ಅಲ್ಲದೇ ಈ ವರೆಗೆ ಇಂತಹ ಟಾಪಿಕ್ ಮೇಲೆ ಯಾರು ಸಹ ಸಿನಿಮಾ ಮಾಡಿರಲಿಲ್ಲ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

ಪ್ಲಸ್ ಮತ್ತು ಮೈನಸ್ ಏನು?
ಚಿತ್ರ ನಿರೂಪಣೆ, ನಿರ್ದೇಶನ, ಸಂಗೀತ ಅತ್ಯುತ್ತಮವಾಗಿದೆ. ಆದರೆ ತುರ್ತು ಪರಿಸ್ಥಿತಿ ಮೇಲೆ ಫೋಕಸ್ ಕಡಿಮೆಯಾಗಿದ್ದು, ಹೆಚ್ಚಾಗಿ ಇಂದು ಮಹಿಳೆ ಮೇಲೆ ಚಿತ್ರ ಆಧರಿತವಾಗಿದೆ.

ಫೈನಲ್ ಸ್ಟೇಟ್‌ಮೆಂಟ್
ತುರ್ತುಪರಿಸ್ಥಿತಿ ಎಂಬುದು ಸಾಮಾನ್ಯ ಜನತೆಯ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಅತ್ಯುತ್ತಮವಾಗಿ ನಿರ್ದೇಶಕರು ನಿರೂಪಣೆ ಮಾಡಿದ್ದಾರೆ. ಚಿತ್ರವನ್ನು ಒಮ್ಮೆ ನೋಡಬಹುದು.