ಕಾಮಿಡಿ ಕಿಂಗ್ ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಷನ್ ಚಿತ್ರ ಅಂದ್ರೆ ಜನರು ನಿರೀಕ್ಷಿಸುವಂತ ಮನರಂಜನೆ ಈ ಚಿತ್ರದಲ್ಲಿ ನೂರಕ್ಕೆ ನೂರು ಪರ್ಸೆಂಟ್ ಅಲ್ಲದಿದ್ದರೂ, ಕೊಟ್ಟ ಕಾಸಿಗೆ ಮೋಸವಿಲ್ಲ ಎಂದೇಳುವಷ್ಟು ಎಂಟರ್‌ಟೈನ್ಸ್‌ಮೆಂಟ್ ಪಕ್ಕಾ ಇದೆ. ಕನ್ನಡ ಚಿತ್ರಗಳ ಸಿದ್ಧ ಸೂತ್ರಗಳನ್ನೇ ಇಟ್ಟುಕೊಂಡು ನಿರ್ಮಿಸಿರುವ ಔಟ್ ಅಂಡ್ ಔಟ್ ಕಮರ್ಸಿಯಲ್ ಎಂಟರ್‌ ಟೈನ್‌ಮೆಂಟ್ ಸಿನಿಮಾ ‘ರಾಜ್ ವಿಷ್ಣು’.

ಕೌಟುಂಬಿಕ ಮೌಲ್ಯಗಳು, ಸ್ನೇಹದ ಮೌಲ್ಯದ ಜೊತೆಗೆ, ದುಡ್ಡಿಗಾಗಿ ಕೆಲವು ದುಷ್ಟರು ಹೇಗೆಲ್ಲಾ ವಂಚನೆಗೆ ಮುಂದಾಗುತ್ತಾರೆ ಎಂಬುದನ್ನು ಕಥೆಯೊಳಗೆ ತುರುಕಿರುವುದರಿಂದ ‘ರಾಜ್‌ ವಿಷ್ಣು’ ಸಿನಿಮಾದ ತೂಕವು ಹೆಚ್ಚಿದೆ ಎಂಬುದು ವಿಶೇಷ. ತಮಿಳಿನ ‘ರಜಿನಿ ಮುರುಗನ್’ ಚಿತ್ರದ ರಿಮೇಕ್ ಆಗಿರುವ ‘ರಾಜ್‌ ವಿಷ್ಣು’ ಸಿನಿಮಾದ ಸಂಪೂರ್ಣ ವಿಮರ್ಶೆ ಈ ಕೆಳಗಿನಂತಿದೆ ಓದಿರಿ.

Rating: 3.0/5
ಚಿತ್ರ: ‘ರಾಜ್‌ ವಿಷ್ಣು’
ನಿರ್ಮಾಣ: ರಾಮು
ನಿರ್ದೇಶನ: ಕೆ.ಮಾದೇಶ್
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ರಾಜೇಶ್ ಕಟ್ಟಾ
ತಾರಾಬಳಗ: ಶರಣ್, ಚಿಕ್ಕಣ್ಣ, ವೈಭವಿ ಶಾಂಡಿಲ್ಯ, ಸಾಧು ಕೋಕಿಲ, ಶ್ರೀನಿವಾಸ ಮೂರ್ತಿ, ಸುಚೇಂದ್ರ ಪ್ರಸಾದ್, ‘ಭಜರಂಗಿ’ ಲೋಕಿ ಮತ್ತು ಇತರರು.
ಬಿಡುಗಡೆ: ಆಗಸ್ಟ್ 4, 2017

ಕೌಟುಂಬಿಕ ಮೌಲ್ಯಗಳ ‘ರಾಜ್‌ ವಿಷ್ಣು’
ವಯಸ್ಸಾದ ಸಂಜೀವಪ್ಪನಿಗೆ(ಶ್ರೀನಿವಾಸ ಮೂರ್ತಿ) ಮೂವರು ಗಂಡು ಮಕ್ಕಳಿದ್ದರೂ, ಮೊಮ್ಮಗ ರಾಜ್‌ವಿಷ್ಣು( ಶರಣ್) ಆರೈಕೆಯೇ ಆಧಾರ. ಬೇರೆ ಕೆಲಸವಿಲ್ಲದಿದ್ದರೂ ತಾತನ ಜೀವನಾಡಿಯಾದ ಈ ರಾಜ್‌ವಿಷ್ಣುಗೆ ತಾನು ಸಾಯುವುದರೊಳಗೆ ಒಂದು ಉದ್ಯೋಗ ಕಲ್ಪಿಸಿಕೊಟ್ಟು ಮದುವೆ ಮಾಡಬೇಕೆಂಬುದು ತಾತನ ಆಸೆ. ಈ ಆಸೆ ಈಡೇರಬೇಕೆಂದರೆ ಫಾರಿನ್‌ನಲ್ಲಿರುವ ಸಂಜೀವಪ್ಪನ ಎಲ್ಲಾ ಮಕ್ಕಳು ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕಬೇಕು. ತಾತನ ಈ ಆಸೆ ಹೇಗೆ ಈಡೇರುತ್ತೆ?, ಮೊಮ್ಮಗ ರಾಜ್‌ವಿಷ್ಣುಗೆ ನಿಜವಾಗಲು ಪ್ರೀತಿಸಿದ ಹುಡುಗಿಯ ಜೊತೆ ಮದುವೆ ಆಗುತ್ತಾ? ಎಂಬುದೇ ಚಿತ್ರಕಥೆ.

ಸಂಜೀವಪ್ಪ-ರಾಜ್‌ವಿಷ್ಣು ಕಥೆಯಲ್ಲಿ ಟ್ವಿಸ್ಟ್
ಫಾರಿನ್‌ನಲ್ಲಿರುವ ತನ್ನ ಮಕ್ಕಳನ್ನು ಹಳ್ಳಿಗೆ ಕರೆಸಲು ಸಂಜೀವಪ್ಪ ಸತ್ತ ನಾಟಕವಾಡುತ್ತಾನೆ. ಈ ವೇಳೆ ಆಸ್ತಿಯಲ್ಲಿ ನನಗೂ ಪಾಲು ಬರಬೇಕು, ನಾನು ಸಂಜೀವಪ್ಪನ ಮೊಮ್ಮಗನೇ ಎಂದು ಹೇಳಿಕೊಂಡು ರೂಪಾಯಿ ಭುಜಂಗ( ಭಜರಂಗಿ ಲೋಕಿ)ನ ಪ್ರವೇಶವಾಗುತ್ತದೆ. ಈ ಭುಜಂಗ ನಿಜವಾಗಲು ಸಂಜೀವಪ್ಪನ ಮೊಮ್ಮಗನೇ? ಮಕ್ಕಳೆಲ್ಲಾ ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕುತ್ತಾರೆಯೇ? ರಾಜ್‌ವಿಷ್ಣು ಮದುವೆ ನಿಜವಾಗಲು ಆಗುತ್ತದೆಯೇ? ಇದಕ್ಕೆಲ್ಲಾ ಉತ್ತರಕ್ಕಾಗಿ ಥಿಯೇಟರ್‌ಗೆ ಒಮ್ಮೆ ಭೇಟಿ ಕೊಡಿ.

ನಿರೀಕ್ಷೆಗೆ ತಕ್ಕ ಕಾಮಿಡಿ ನೀಡುವ ಶರಣ್-ಚಿಕ್ಕಣ್ಣ
ಶರಣ್ ನಾಯಕ ನಟನಾಗಿ ಮತ್ತು ಕಾಮಿಡಿ ನಟನಾಗಿ ಎಂದಿನಂತೆ ತಮ್ಮ ಪಾತ್ರವನ್ನು ಇಲ್ಲೂ ಮುಂದುವರೆಸಿದ್ದಾರೆ. ಹಿಂದಿನ ಚಿತ್ರಗಳಿಗಿಂತ ಇನ್ನಷ್ಟು ಸೂಪರ್ ಆಗಿ ಹಾಡುಗಳಲ್ಲಿ ಸ್ಟೆಪ್‌ ಹಾಕಿದ್ದು, ಒಂದು ಅದ್ಧೂರಿ ಫೈಟ್ ಸಹ ಮಾಡಿದ್ದಾರೆ. ಶರಣ್ ಪಾಟ್ನರ್ ಆಗಿ ಚಿಕ್ಕಣ್ಣ, ಶರಣ್ ರಷ್ಟೇ ಡ್ಯಾನ್ಸ್, ಅಭಿನಯ, ಕಾಮಿಡಿ ಎಲ್ಲದರಲ್ಲೂ ಗಮನ ಸೆಳೆದಿದ್ದು, ಈ ಇಬ್ಬರ ‘ಅಧ್ಯಕ್ಷ’ ಚಿತ್ರವನ್ನು ಮತ್ತೆ ನೆನಪಿಸಿದ್ದಾರೆ.

ವೈಭವಿ ಅಭಿನಯದ ಹೇಗಿದೆ..
ಕನ್ನಡಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿರುವ ನಟಿ ವೈಭವಿ ಶಾಂಡಿಲ್ಯ ರವರು ಶರಣ್ ಜೋಡಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ಅವರನ್ನು ಇನ್ನೂ ಹೆಚ್ಚಾಗಿ ಬಳಸಿಕೊಳ್ಳಬಹುದಿತ್ತು.

ಶ್ರೀಮುರುಳಿ ಮತ್ತು ಇತರರು
ಸಿನಿಮಾ ಪೋಸ್ಟರ್ ನಲ್ಲಿ ಶ್ರೀಮುರುಳಿ ನೋಡಿ ಅವರ ವಿಶೇಷ ಪಾತ್ರವನ್ನು ನೋಡಬಹುದು ಎಂದುಕೊಂಡವರಿಗೆ ನಿರಾಸೆ ಕಂಡಿತ. ಯಾಕಂದ್ರೆ ಶುಭಂ ವೇಳೆಗೆ ಬಂದು ಹುಟ್ಟಿಬೆಳೆದ ಮನೆ, ಕುಟುಂಬದ ಪ್ರೀತಿ ಬಗ್ಗೆ ಒಂದೆರಡು ಡೈಲಾಗ್ ಹೇಳುತ್ತಾರೆ ಅಷ್ಟೆ. ಉಳಿದಂತೆ ಸಂಜೀವಪ್ಪನ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ, ರುಪಾಯಿ ಭುಜಂಗನಾಗಿ ‘ಭಜರಂಗಿ’ ಲೋಕಿ ಮತ್ತು ಇತರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದರೆ ಮೂರು ಗೆಟಪ್‌ಗಳಲ್ಲಿ ಸಾಧುಕೋಕಿಲ ರವರು ಹೆಚ್ಚು ಕಚಗುಳಿ ಇಡುತ್ತಾರೆ.

ನಿರ್ದೇಶನ
ಸ್ಟಾರ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸದಾ ಗೆಲ್ಲುವ ಕೆ.ಮಾದೇಶ್ ರವರು ‘ರಾಜ್‌ವಿಷ್ಣು’ ಚಿತ್ರದಲ್ಲೂ ಔಟ್ ಅಂಡ್ ಔಟ್ ಕಾಮಿಡಿ ಎಂಟರ್‌ಟೈನ್‌ಮೆಂಟ್‌ಗೆ ಬೇಕಾದ ಎಲ್ಲಾ ಎಲಿಮೆಂಟ್‌ಗಳನ್ನು ಮಿಸ್ ಮಾಡದೇ ತುರುಕಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು ಸುತ್ತಮುತ್ತಲೇ ಚಿತ್ರೀಕರಣ ಮಾಡಿದ್ದರೂ ಸಿನಿಮಾ ಮೇಕಿಂಗ್ ದೃಷ್ಟಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ.

ಸಂಗೀತ ಮತ್ತು ಟೆಕ್ನಿಕಲಿ ಸಿನಿಮಾ
ರಾಜೇಶ್ ಕಟ್ಟಾ ರವರು ಮೇಲುಕೋಟೆ ಮತ್ತು ಗಾಮಾಂತರ ಪ್ರದೇಶಗಳಲ್ಲಿ ಹಾಕಿದ ಸೆಟ್‌ ಅನ್ನೇ ತಮ್ಮ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದು ಚಿತ್ರದ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಅರ್ಜುನ್ ಜನ್ಯ ಸಂಗೀತದ ‘ಬೇಡರ ಕಣ್ಣಪ’ ಹಾಡು ಗುನುಗುತ್ತದೆ. ಉಳಿದ ಹಾಡುಗಳು ಚಿತ್ರಮಂದಿರದೊಳಗಿನ ರಿಲೀಫ್‌ಗಷ್ಟೇ ಸೀಮಿತ.

ಈ ವೀಕೆಂಡ್ ಗೆ ಒಮ್ಮೆ ನೋಡಬಹುದು..
‘ಅಧ್ಯಕ್ಷ’ ಚಿತ್ರದ ನಂತರ ಮೊತ್ತೊಮ್ಮೆ ಶರಣ್-ಚಿಕ್ಕಣ್ಣ ಜೋಡಿಯಾಗಿರುವ ‘ರಾಜ್‌ ವಿ‍ಷ್ಣು’ ಅವರ ಹಿಂದಿನ ಚಿತ್ರದಷ್ಟೇ ಮನರಂಜನೆ ನೀಡುತ್ತದೆ. ಎಲ್ಲೂ ಸಹ ಅನಾವಶ್ಯಕ ಸಂಭಾಷಣೆ, ಹಾಡುಗಳು ಯಾವುದು ಇಲ್ಲ. ಪ್ರೇಕ್ಷಕ ಕಣ್ಣು ಮುಚ್ಚದೇ ಕಾಮಿಡಿ ಎಂಜಾಯ್ ಮಾಡುವ ರೀತಿ ಇಬ್ಬರು ಕಾಮಿಡಿ ನಟರ ಜುಗಲ್‌ಬಂದಿ ಚೆನ್ನಾಗಿದೆ. ಈ ವೀಕೆಂಡ್‌ಗೆ ಮಿಸ್ ಮಾಡದೇ ಕುಟುಂಬ ಸಮೇತ ಚಿತ್ರವನ್ನು ನೋಡಬಹುದು.