ಸ್ಯಾಂಡಲ್ ವುಡ್ ನ ಮತ್ತೊಂದು ತಾರಾಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಾಂಪತ್ಯಕ್ಕೆ ಅಡಿಯಿಡಲಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ ಇದೇ ತಿಂಗಳು ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದ್ದು, ಈ ವರ್ಷಾಂತ್ಯಕ್ಕೆ ಸಪ್ತಪದಿ ತುಳಿಯಲಿದ್ದಾರೆ.

ಹಾಗಾದ್ರೆ, ಚಿರು ಸರ್ಜಾ ಮತ್ತು ಮೇಘನಾ ಜೋಡಿಯ ಎಂಗೇಜ್ ಮೆಂಟ್ ಯಾವಾಗ? ಮದುವೆ ಯಾವಾಗ ಮತ್ತು ಎಲ್ಲಿ? ಎಂಬ ವಿವರ ತಿಳಿಯಲು ಮುಂದೆ ಓದಿ……

ಅಕ್ಟೋಬರ್ ನಲ್ಲಿ ನಿಶ್ಚಿತಾರ್ಥ
ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ಇದೇ ತಿಂಗಳ 22ಕ್ಕೆ ನಡೆಯಲಿದೆ ಎಂಬ ಸುದ್ದಿ ಈಗ ಚಂದನವನದಲ್ಲಿ ಹರಿದಾಡುತ್ತಿದೆ.

ಡಿಸೆಂಬರ್ ನಲ್ಲಿ ಮದುವೆ

ಈ ತಿಂಗಳಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳಲಿರುವ ಜೋಡಿಯ ವಿವಾಹ ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಹೇಳಲಾಗಿದೆ.

ಲೀಲಾ ಪ್ಯಾಲೇಸ್ ನಲ್ಲಿ ಮದುವೆ

ಸರಳವಾಗಿ ಮನೆಯಲ್ಲೇ ಮದುವೆ ನಿಶ್ಚಯ ಮಾಡಿಕೊಂಡು ಲೀಲಾ ಪ್ಯಾಲೇಸ್ ನಲ್ಲಿ ತಾರೆಗಳು ಹಾಗೂ ಬಂಧು ಮಿತ್ರರಿಗೆ ಔತಣಕೂಟ ಏರ್ಪಡಿಸಲು ನಿರ್ಧರಿಸಲಾಗಿದೆಯಂತೆ.

ಕುಟುಂಬದವರು ಏನಂತಾರೆ?

ಈ ಸುದ್ದಿ ಬಗ್ಗೆ ಸ್ಪಷ್ಟನೆ ಪಡೆಯುವುದಕ್ಕಾಗಿ ವರದಿಗಾರರು, ಚಿರು ಸರ್ಜಾ ಮತ್ತು ಮೇಘನಾ ರಾಜ್ ಅವರನ್ನ ಮತ್ತು ಅವರ ಕುಟುಂಬದವರನ್ನ ಸಂಪರ್ಕಿಸಿದಾಗ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ಸ್ಟಾರ್ ದಂಪತಿಯ ಮಕ್ಕಳು
ಕನ್ನಡದ ಹಿರಿಯ ನಟ ಸುಂದರ್ ರಾಜ್ ಮತ್ತು ನಟಿ ಪ್ರಮೀಳಾ ಜೋಷಾಯ್ ದಂಪತಿಯ ಮಗಳು ಮೇಘನಾ ರಾಜ್. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಚಿರಂಜೀವಿ ಖ್ಯಾತ ನಟ ಅರ್ಜುನ್ ಸರ್ಜಾ ಸೋದರಳಿಯನಾಗಿದ್ದು, ‘ವಾಯುಪುತ್ರ’, ‘ವರದನಾಯಕ’, ‘ಆಟಗಾರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.