‘ದೃಶ್ಯ’ ಸಿನಿಮಾದಲ್ಲಿ ರವಿಚಂದ್ರನ್ ರವರ ಪಾತ್ರದ ಹೆಸರು ‘ರಾಜೇಂದ್ರ ಪೊನ್ನಪ್ಪ’. ಈಗ ಅದೇ ‘ರಾಜೇಂದ್ರ ಪೊನ್ನಪ್ಪ’ ಹೆಸರಿನಲ್ಲಿ ರವಿಚಂದ್ರನ್ ಸಿನಿಮಾ ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ.

ರವಿಚಂದ್ರನ್ ನಿರ್ದೇಶನದ ‘ರಾಜೇಂದ್ರ ಪೊನ್ನಪ್ಪ’ ಚಿತ್ರದ ಚಿತ್ರೀಕರಣ ಶುರು ಆಗಿದೆ. ‘ರಾಜೇಂದ್ರ ಪೊನ್ನಪ್ಪ’ ಶೂಟಿಂಗ್ ಸ್ಪಾಟ್ ನಲ್ಲಿ ‘ಸ್ವೀಟಿ’ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದಾರೆ.

ಹನ್ನೊಂದು ವರ್ಷಗಳ ಬಳಿಕ ರವಿಚಂದ್ರನ್ ರವರ ಜೊತೆ ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸುತ್ತಿದ್ದಾರೆ. ‘ಹಠವಾದಿ’, ‘ಒಡಹುಟ್ಟಿದವಳು’ ಸಿನಿಮಾಗಳ ಬಳಿಕ ರವಿಚಂದ್ರನ್ ಗೆ ರಾಧಿಕಾ ಜೋಡಿಯಾಗಿದ್ದಾರೆ.

‘ರುದ್ರತಾಂಡವ’, ‘ನಮಗಾಗಿ’ ಚಿತ್ರಗಳ ಬಳಿಕ ರಾಧಿಕಾ ಕುಮಾರಸ್ವಾಮಿ ಯಾವ ಚಿತ್ರಗಳನ್ನೂ ಒಪ್ಪಿಕೊಂಡಿರಲಿಲ್ಲ. ಇದೀಗ ಕ್ರೇಜಿ ಸ್ಟಾರ್ ರವರ ‘ರಾಜೇಂದ್ರ ಪೊನ್ನಪ್ಪ’ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯ ರಿಯಾಲಿಟಿ ಶೋಗೂ ತೀರ್ಪುಗಾರರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಕುಮಾರಸ್ವಾಮಿ ಮತ್ತೆ ಸಕ್ರಿಯರಾಗಿರುವುದು ಅವರ ಅಭಿಮಾನಿಗಳಿಗಂತೂ ಸಖತ್ ಖುಷಿ ಕೊಟ್ಟಿದೆ.