3 01 1512110002

ಉತ್ತರ ಕರ್ನಾಟಕದ ರಾಜಕೀಯ ಹಾಗು ಭೂಗತ ಲೋಕದ ಜೊತೆಗೆ ಕೌಟುಂಬಿಕ ಸಂಬಂಧಗಳ ಕುರಿತಾದ ವಸ್ತು ಸಿನೆಮಾದಲ್ಲಿದೆ. ಕಾನೂನಿನ ವ್ಯಾಪ್ತಿಯನ್ನು ಮೀರಿದ ವ್ಯವಹಾರಗಳನ್ನು ಮಾಡುತ್ತ ಅದರ ದುಡ್ಡಿನಲ್ಲಿ ಸಮಾಜ ಸೇವೆ ಮಾಡುವ ಸಿನೆಮಾಗಳು ಸಾಕಷ್ಟು ಬಂದಿವೆ. ಮಫ್ತಿ ಸಿನೆಮಾ ಕೂಡ ಅದೇ ದಾಟಿಯ ಮತ್ತೊಂದು ಯಶಸ್ವೀ ಪ್ರಯೋಗ. ಚಿತ್ರಕತೆಯಲ್ಲಿರುವ ಪಾತ್ರಗಳ ಪೋಷಣೆ ಹಾಗು ಕಥೆ ಬೆಳೆದು ನಿಲ್ಲುವ ವೇಗದಿಂದಾಗಿ ಸಿನೆಮಾ ವಸ್ತು ಹೊಸದೆನಿಸುತ್ತದೆ.

ಮುಖ್ಯವಾಗಿ ನೂರು ಚಿತ್ರಗಳ ನಂತರವೂ ಹೊಸ ರೂಪದಲ್ಲಿ ಕಾಣಿಸಿಕೊಳ್ಳುವ ಶಿವಣ್ಣ ಪಾತ್ರ ತೆರೆಯ ಮೇಲೆ ಇದ್ದಷ್ಟು ಹೊತ್ತು ನಮ್ಮನ್ನು ರಂಜಿಸುತ್ತಲೇ ಕಾಡುತ್ತಾರೆ. ತನ್ನ ಮೂರು ದಶಕಗಳ ಕಲಾ ಬದುಕಿನಲ್ಲಿ ಶಿವಣ್ಣ ಬಹಳಷ್ಟು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಫ್ತಿ ಸಿನೆಮಾದಲ್ಲಿನ ಭೈರತಿ ರಣಗಲ್ ಪಾತ್ರ ಇಲ್ಲಿಯವರೆಗಿನ ಅವರ ಎಲ್ಲ ಸಿನೆಮಾಗಳಿಗಿಂತ ವಿಶೇಷವಾದದ್ದು.

“ನಿನ್ನ ಹಠದ ಭಾರಕ್ಕಿಂತ ನನ್ನ ತಾಳ್ಮೆಯ ಭಾರವೇ ಹೆಚ್ಚು” ಎನ್ನುತ್ತದೆ ಒಂದು ಪಾತ್ರ. ತೊಡೆ ತಟ್ಟಿ ಅಬ್ಬರಿಸುವ ಕಷ್ಟವನ್ನು ಸಿನೆಮಾದ ಮುಖ್ಯ ಪಾತ್ರಗಳು ತೆಗೆದುಕೊಳ್ಳುವುದಿಲ್ಲ. ಸರಿ ತಪ್ಪುಗಳ ಲೆಕ್ಕ ಹಾಕದೆ, ಕಾನೂನಿನ ತರ್ಕದಿಂದ ಚಿತ್ರಕತೆಯನ್ನು ಹೆಚ್ಚು ವಿಶ್ಲೇಷಿಸುವ ಗೋಜಿಗೆ ಹೋಗದೆ ಸಿನೆಮಾದುದ್ದಕ್ಕೂ ರಕ್ತ ಹರಿಯುತ್ತದೆ.

ಬಹಳಷ್ಟು ಸಂದರ್ಭಗಳಲ್ಲಿ ಸಿನೆಮಾದ ಓಟವನ್ನು ತಗ್ಗಿಸಿ ಆ ಸಿನೆಮಾದ ಸೋಲಿಗೆ ಕಾರಣವಾಗುವ ಅನಗತ್ಯ ಹಾಡುಗಳ ಹಿಂಸೆ ಮಫ್ತಿ ಸಿನೆಮಾದಲ್ಲಿಲ್ಲ. ಗುಣ, ಶಬರಿ, ಸೇನಾ, ಸಿಂಘ ಎನ್ನುವ ಪರಿಚಿತ ಆದರೆ ಸಿನೆಮಾಗಳ ಮಟ್ಟಿಗೆ ಅಪರೂಪ ಎನಿಸುವ ಹೆಸರುಗಳನ್ನೂ ಪಾತ್ರಗಳಿಗೆ ಇಡಲಾಗಿದೆ.

ಇತ್ತೀಚಿಗೆ ಕೇವಲ ಬೆಂಕಿ ಉಗುಳುವ ಸಂಭಾಷಣೆಯನ್ನಷ್ಟೇ ನೆಚ್ಚಿಕೊಂಡು ಬಹಳಷ್ಟು ಸಿನೆಮಾಗಳು ತೆರೆ ಕಾಣುತ್ತಿವೆ. ಮಫ್ತಿ ಸಿನೆಮಾದಲ್ಲಿ ಶಿವಣ್ಣ ಮುಖಭಾವ ಅಂತಹ ಅನಗತ್ಯ ಸಂಭಾಷಣೆಗಳಿಗೆ ಜಾಗವಿಲ್ಲದಂತೆ ಮಾಡುತ್ತದೆ.

ಕಡಿಮೆ ಮಾತನಾಡಿಯೂ ಭೈರತಿ ರಣಗಲ್ ಪಾತ್ರ ಸಿಳ್ಳೆ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತದೆ. ಶಿವಣ್ಣ ಅವರಿಗೆ ಇಂತದ್ದೊಂದು ಪಾತ್ರದ ಅಗತ್ಯವಿತ್ತು ಏನಿಸುವಷ್ಟು ಅಚ್ಚುಕಟ್ಟಾಗಿ ಸಿನೆಮಾದಲ್ಲಿ ಅವರ ಪಾತ್ರ ಪೋಷಣೆಯಿದೆ.

ಉಗ್ರಂ ಸಿನೆಮಾದ ಭರ್ಜರಿ ಗೆಲುವು ಶ್ರೀಮುರಳಿ ವೃತ್ತಿ ಬದುಕಿಗೆ ಮಹತ್ತರ ತಿರುವನ್ನು ನೀಡಿತ್ತು. ಇದೀಗ ಮಫ್ತಿ ಮೂಲಕ ಶ್ರೀಮುರಳಿ ಖಾತೆಗೆ ಮತ್ತೊಂದು ದೊಡ್ಡ ಗೆಲುವು ಸಂದಾಯವಾಗಲಿದೆ.

ಮಫ್ತಿ ಸಿನೆಮಾದ ಮೊದಲಾರ್ಧವನ್ನು ಹೊತ್ತು ಸಾಗುವುದು ಶ್ರೀಮುರಳಿ. ಸಾಹಸ ದೃಶ್ಯಗಳಲ್ಲಿನ ಅವರ ಚುರುಕುತನ, ಗಂಭೀರ ಮುಖಚರ್ಯೆ, ಅವರದ್ದೇ ಶೈಲಿಯಲ್ಲಿ ಸಂಭಾಷಣೆ ಒಪ್ಪಿಸುವಿಕೆ ಎಲ್ಲವೂ ಶ್ರೀಮುರಳಿಗೆ ಮತ್ತಷ್ಟು ಅಭಿಮಾನಿಗಳನ್ನು ಈ ಸಿನೆಮಾದ ಮೂಲಕ ಸಂಪಾದಿಸಿ ಕೊಡಲಿದೆ.

ಮೊದಲಾರ್ಧ : ಸಿನೆಮಾದ ಮೊದಲಾರ್ಧ ಸ್ವಲ್ಪ ಜಾಸ್ತಿಯಾಯಿತು ಅನಿಸಿತು. ವಸಿಷ್ಟ ಸಿಂಹ ಮಾಡಿರುವ ಪಾತ್ರದ ವಿಸ್ತರಣೆ ಹಾಗು ಅದರ ಕೊನೆಯನ್ನು ಇನ್ನಷ್ಟು ಒಪ್ಪವಾಗಿ ಮಾಡಬಹುದಿತ್ತು. ಸಿನೆಮಾದ ಪಾತ್ರಗಳೆಲ್ಲವೂ ಗತ್ತು ಗಾಂಭೀರ್ಯದಿಂದ ಇರುವಾಗ ಸಿನೆಮಾದ ಮೂಲಕತೆಯ ಜೊತೆ ನಂಟು ಇಲ್ಲದೆ ಚಿತ್ರಕತೆಯಲ್ಲಿ ಜಾಗ ಆಕ್ರಮಿಸಿಕೊಂಡು ನಗಿಸುವ ಸಾಧು ಕೋಕಿಲ ಹಾಗು ಚಿಕ್ಕಣ್ಣ ಸ್ವಲ್ಪ ಭಾರವಾದರು ಎನಿಸಿತು. ಎಲ್ಲರ ಅಭಿರುಚಿಯನ್ನು ತಣಿಸುವ ಉದ್ದೇಶ ನಿರ್ದೇಶಕರದಿದ್ದರು ಕೂಡ ಹಾಸ್ಯ ದೃಶ್ಯಗಳ ಅಗತ್ಯವಿರಲಿಲ್ಲ.

ಮಾಸ್ ಹಾಗು ಕ್ಲಾಸ್ ಸಿನೆಮಾಗಳ ಜೊತೆಗೆ ಜನ ನೋಡುವ ಸಿನೆಮಾಗಳನ್ನು ಮಾಡುವ ನಿರ್ದೇಶಕರು ಸಾಕಷ್ಟು ಜನರಿದ್ದಾರೆ. ಅಂತವರಲ್ಲಿ ನಿರ್ದೇಶಕ ನರ್ತನ್ ಕೂಡ ಒಬ್ಬರಾಗಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಸಿನೆಮಾದಲ್ಲಿ ಸಹ ನಿರ್ದೇಶಕನ ಕರ್ತವ್ಯ ನಿರ್ವಹಿಸಿದ್ದ ನರ್ತನ್ ನಿರ್ದೇಶಿಸಿರುವ ಮಫ್ತಿ ಸಿನೆಮಾ ಉಗ್ರಂ ಮಾಡಿರುವ ಜಾದೂವನ್ನು ಮರುಕಳಿಸಲಿದೆ.

ಹಿನ್ನಲೆ ಸಂಗೀತ:  ವಿಶೇಷ ಪರಿಣತಿ ಹೊಂದಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಹಿನ್ನಲೆ ಸಂಗೀತ ಹಾಗು ಸಿನೆಮಾದ ಕೊನೆಯ ಹಂತದಲ್ಲಿ ಬರುವ ಹಾಡು ಸಿನೆಮಾವನ್ನು ಮತ್ತಷ್ಟು ವಿಶೇಷವಾಗಿಸಿದೆ.

ನವೀನ ಕುಮಾರ್ ಛಾಯಾಗ್ರಹಣ ಚಿತ್ರಕತೆಯ ಕತ್ತಲು ಬೆಳಕಿನ ಅಗತ್ಯವನ್ನು, ರಕ್ತ ಹೀರುತ್ತ ಧೂಳು ಕೆಮ್ಮುವ ಬಯಲು ಸೀಮೆಯ ಬಯಲನ್ನು ಸಮರ್ಥವಾಗಿ ಸೆರೆ ಹಿಡಿದಿದೆ. ಪೋಷಕ ಪಾತ್ರಗಳಲ್ಲಿ ನಟಿಸಿರುವ ಹಿರಿಯ ನಟ ದೇವರಾಜ್ ಮತ್ತೆ ನಕಾರಾತ್ಮಕ ಪಾತ್ರದಲ್ಲಿ ಗೆದ್ದಿದ್ದಾರೆ. ವಸಿಷ್ಟ ಸಿಂಹ ತೆರೆಯ ಮೇಲೆ ಮತ್ತಷ್ಟು ಹೊತ್ತು ಇರಬೇಕಿತ್ತು. ಸಾನ್ವಿ ಶ್ರೀವಾಸ್ತವ ನಟಿಸಿರುವ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆಯಿಲ್ಲ.

ಮಫ್ತಿ ಒಂದು ಮಾಸ್ ಸಿನೆಮಾ ಎಂದರೆ ತಪ್ಪಾಗುತ್ತದೆ. ಭೂಗತ ಲೋಕವನ್ನು ತೋರಿಸುತ್ತಲೇ ರಾಜಕೀಯಕ್ಕೆ ತಿರುಗುವ ಸಿನೆಮಾ ದ್ವಿತೀಯಾರ್ಧದಲ್ಲಿ ಕೌಟುಂಬಿಕ ಸಿನೆಮಾವಾಗಿ ಬದಲಾಗುತ್ತದೆ. ಮನೆಯವರು ಹಾಗು ಸ್ನೇಹಿತರ ಜೊತೆ ಹೋಗಿ ನೋಡಬಹುದಾದ ಸಿನೆಮಾವಿದು.