ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ- ದಿ ಕನ್ ಕ್ಲೂಷನ್’ ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ಅಲ್ಲದೇ 20 ದಿನಗಳ ಅಂತ್ಯಕ್ಕೆ 1450 ಕೋಟಿ ರೂ ಗಿಂತ ಅಧಿಕ ಮೊತ್ತ ಗಳಿಸಿ ಇನ್ನೂ ಸಹ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಪಡೆಯುತ್ತಿದೆ.

ಭಾರತದಲ್ಲಿ ಹೊಸ ದಾಖಲೆ ಬರೆದ ‘ಬಾಹುಬಲಿ- ದಿ ಕನ್ ಕ್ಲೂಷನ್’ ಚಿತ್ರವೀಗ ಸಿಂಗಾಪೂರ್ ನಲ್ಲಿ ಬಿಡುಗಡೆಗೆ ಸಜ್ಜಾಗಿದ್ದು, ಅಲ್ಲಿನ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ. ಈ ಮೂಲಕ ಚಿತ್ರವನ್ನು ವಯಸ್ಕರು ಮಾತ್ರ ನೋಡಬಹುದು ಎಂದು ಹೇಳಿದೆ. ಆದರೆ ಈ ಚಿತ್ರಕ್ಕೆ ಭಾರತ ಸೆನ್ಸಾರ್ ಮಂಡಳಿ ‘ಯು/ಎ (U/A)’ ಪ್ರಮಾಣ ಪತ್ರ ನೀಡಿತ್ತು.

ಅಂದಹಾಗೆ ಸಿಂಗಾಪೂರ್ ಚಲನಚಿತ್ರ ಸೆನ್ಸಾರ್ ಮಂಡಳಿ ಇದೇ ಮೊದಲೇನಲ್ಲದೇ, ಭಾರತದಲ್ಲಿ ‘ಯು/ಎ’ ಸರ್ಟಿಫಿಕೇಟ್ ಪಡೆದ ಹಲವು ಚಿತ್ರಗಳಿಗೆ ‘ಎ’ ಸರ್ಟಿಫಿಕೇಟ್ ನೀಡಿದೆ. ಇತ್ತೀಚೆಗೆ ಡಿಸ್ನಿಯ ‘ಬ್ಯೂಟಿ ಅಂಡ್ ದಿ ಬೀಸ್ಟ್’ ಇಂಗ್ಲಿಷ್ ಚಿತ್ರಕ್ಕೂ ‘ಎ’ ಪ್ರಮಾಣ ಪತ್ರ ನೀಡಿತ್ತು.

‘ಬಾಹುಬಲಿ -2’ ಚಿತ್ರವನ್ನು 16 ವರ್ಷದೊಳಗಿನ ಮಕ್ಕಳು ಏಕೆ ನೋಡಬಾರದು ಎಂಬುದಕ್ಕೆ, ಈ ಚಿತ್ರದಲ್ಲಿ ಹಲವು ಯುದ್ಧದ ಸನ್ನಿವೇಶಗಳು, ತಲೆ ಕತ್ತರಿಸುವ ದೃಶ್ಯಗಳು ಹಿಂಸಾತ್ಮಕವಾಗಿದ್ದು ಆಪ್ರಾಪ್ತರು ಚಿತ್ರ ನೋಡುವಂತಿಲ್ಲ ಎಂದು ಸಿಂಗಾಪೂರ್ ಚಲನಚಿತ್ರ ಸೆನ್ಸಾರ್ ಮಂಡಳಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಸೆನ್ಸಾರ್ ಮಂಡಳಿ ಅಧ್ಯಕ್ಷರಾದ ಪಹಲಜ್ ನಿಹಲಾನಿ ರವರು ” ‘ಬಾಹುಬಲಿ- ದಿ ಕನ್ ಕ್ಲೂಷನ್’ ಚಿತ್ರಕ್ಕೆ ಯಾವುದೇ ಕತ್ತರಿಹಾಕದೇ ನಾವು ಯು/ಎ ಪ್ರಮಾಣ ಪತ್ರ ನೀಡಿದ್ದೇವೆ.

ಆದರೆ ಸಿಂಗಾಪೂರ್ ಸೆನ್ಸಾರ್ ಮಂಡಳಿ ಚಿತ್ರದಲ್ಲಿ ಯುದ್ಧ ಸಂದರ್ಭಗಳಲ್ಲಿ ಹಲವು ಹಿಂಸಾತ್ಮಕ ದೃಶ್ಯಗಳನ್ನು ಗುರುತಿಸಿ ಪ್ರಮಾಣ ಪತ್ರ ನೀಡಿದೆ. ಏಷಿಯಾದ ಹಲವು ದೇಶಗಳು ಮತ್ತು ಯೂರೋಪ್ ನಲ್ಲಿ ಬಾಲಿವುಡ್ ಸಿನಿಮಾಗಳು ‘ಎ’ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿವೆ” ಎಂದು ಹೇಳಿದ್ದಾರೆ.