‘ದಯವಿಟ್ಟು ಗಮನಿಸಿ’….ಎಂಬ ಘೋಷಣೆಯೊಂದಿಗೆ ರೈಲ್ವೆ ಸ್ಟೇಷನ್ ನಲ್ಲಿ ಶುರುವಾಗುವ ಸಿನಿಮಾ, ಮನುಷ್ಯನ ಬದುಕಿನ ಪಯಣವನ್ನ ನಾಲ್ಕು ಕಥೆಗಳ ಮೂಲಕ ಬಹಳ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ, ಮನರಂಜನಾತ್ಮಕವಾಗಿ ಕಣ್ಣಿಗೆ ಕಟ್ಟುವಾಗೆ ತೆರೆಗೆ ತರುವಲ್ಲಿ ನಿರ್ದೇಶಕರು ಗೆದ್ದಿದೆ. ‘ದಯವಿಟ್ಟು ಗಮನಿಸಿ’ ಚಿತ್ರದ ಪೂರ್ತಿ ವಿಮರ್ಶೆಯನ್ನ ಮುಂದೆ ನೀಡಲಾಗಿದೆ.
Rating: 4.0/5
ಚಿತ್ರ: ದಯವಿಟ್ಟು ಗಮನಿಸಿ
ನಿರ್ಮಾಣ: ಕೃಷ್ಣ ಸಾರ್ಥಕ್
ನಿರ್ದೇಶನ: ರೋಹಿತ್ ಪದಕಿ
ಸಂಗೀತ: ಅನೂಪ್ ಸೀಳಿನ್
ಛಾಯಾಗ್ರಹಣ: ಅರವಿಂದ್ ಕಶ್ಯಪ್
ತಾರಾಗಣ: ರಘು ಮುಖರ್ಜಿ, ವಸಿಷ್ಠ ಸಿಂಹ, ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ಭಾವನಾ, ಸಂಗೀತಾ ಭಟ್, ಸುಕೃತಾ ವಾಗ್ಲೆ, ಸಂಯುಕ್ತ ಹೊರನಾಡು, ಮತ್ತಿತರರು.
ಬಿಡುಗಡೆ: ಅಕ್ಟೋಬರ್ 20, 2017

ಗಮನಿಸಬೇಕಾದ ಅಂಶ

ಈ ಚಿತ್ರದಲ್ಲಿ ನಾಲ್ಕು ಕಥೆಗಳಿವೆ. ಸಾಮಾನ್ಯ ಮನುಷ್ಯನ ದೈನಂದಿನ ಜೀವನದ ಸಂತೋಷ, ದುಃಖ, ಗೋಳಾಟ, ಎಲ್ಲವೂ ಈ ಕಥೆಗಳಲ್ಲಿದೆ. ಜಾತಿ, ಜಗಳ, ಪ್ರೇಮ, ಕಾಮ, ಕುಟುಂಬ, ಕಟ್ಟುಪಾಡು ಹೀಗೆ ಸಮಾಜದಲ್ಲಿನ ಚಿಕ್ಕ ಪುಟ್ಟ ವಿಷ್ಯಗಳನ್ನ ಮನರಂಜನಾತ್ಮಕವಾಗಿ ಬಿಂಬಿಸಲಾಗಿದೆ. ಈ ಸಿನಿಮಾ ನೋಡಿದ ಮೇಲೆ ಪ್ರತಿಯೊಬ್ಬರ ಜೀವನದಲ್ಲೂ ಈ 4 ಕಥೆಗಳಲ್ಲಿ ಒಂದು ನಮ್ಮದು ಎಂಬ ಭಾವನೆ ಬರುತ್ತೆ.

ಟ್ವಿಸ್ಟ್ ಕೊಡುವ ಮೊದಲ ಕಥೆ

ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿಯ ಜೀವನ ಮತ್ತು ಆ ಸಮಯದಲ್ಲಿ ಮದುವೆಯ ಅವಕಾಶ ಬಂದಾಗ ಆ ವ್ಯಕ್ತಿಯ ಜೀವನದಲ್ಲಾಗುವ ಘಟನೆಗಳು ಚಿತ್ರದ ಮೊದಲ ಕಥೆ. ಈ ಕಥಾ ಪ್ರಸಂಗದಲ್ಲಿ ರಾಜೇಶ್ ನಟರಂಗ ಮತ್ತು ಪ್ರಕಾಶ್ ಬೆಳವಾಡಿ ಅವರು ಕಾಣಿಸಿಕೊಂಡಿದ್ದು, ಇವರಿಬ್ಬರ ಕಾಂಬಿನೇಷನ್ ಸೂಪರ್ ಆಗಿದೆ. ಈ ಕಥೆಯಲ್ಲಿ ಬರುವ ಟ್ವಿಸ್ಟ್ ನಿಂದ ಮುಂದಿನ ಮೂರು ಕಥೆ ಇಂಟ್ರೆಸ್ಟಿಂಗ್ ಎನಿಸುತ್ತೆ.

ಪ್ರೇಮ ಪ್ರಸಂಗ

ಎರಡನೇಯ ಅಧ್ಯಾಯ ಪ್ರೇಮಕಥೆ. ವಸಿಷ್ಠ ಸಿಂಹ ಮತ್ತು ಸಂಗೀತಾ ಭಟ್ ಈ ಸ್ಟೋರಿ ನಾಯಕ ಮತ್ತು ನಾಯಕಿ. ಇಲ್ಲಿ ವಸಿಷ್ಠ ಸಿಂಹ ತಮ್ಮ ಲುಕ್, ಗೆಟಪ್ ಹಾಗೂ ಅಭಿನಯ ಮೂಲಕ ಸಖತ್ ಇಷ್ಟವಾಗ್ತಾರೆ. ಸಂಗೀತಾ ಭಟ್ ಕೂಡ ಗಮನ ಸೆಳೆಯುತ್ತಾರೆ. ಮೊದಲ ಕಥೆಗೂ, ಎರಡನೇ ಕಥೆಗೂ ಏನು ಸಂಬಂಧ ಎಂಬುದು ಮತ್ತೆ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತೆ.

ಸ್ವಾಮೀಜಿಯ ಬದುಕು

ಮೂರನೇ ಅಧ್ಯಾಯದಲ್ಲಿ ಸ್ವಾಮೀಜಿ ಕಥೆ ಬರುತ್ತೆ. ಅರವಿಂದ್, ಪೂರ್ಣಚಂದ್ರ, ಹಾಗೂ ಸುಕೃತಾ ವಾಗ್ಲೆ ಈ ಸ್ಟೋರಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಧರ್ಮದಿಂದ ಧರ್ಮ ಬದಲಿಸುವ ಸ್ವಾಮೀಜಿಯ ನಿಜ ಕಥೆ ಏನು ಎಂಬುದೇ ಪ್ರಶ್ನೆಯಾಗಿ ಉಳಿಯುತ್ತೆ.

ನಾಲ್ಕನೇ ಕಥೆ

ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಬದುಕು, ಮನಸ್ಥಿತಿ, ಸುತ್ತ ಕಥೆ ಸಾಗುತ್ತೆ. ರಘು ಮುಖರ್ಜಿ, ಭಾವನಾ ಮತ್ತು ಸಂಯುಕ್ತ ಹೊರನಾಡು ಈ ಸ್ಟೋರಿಯಲ್ಲಿ ಅಭಿನಯಿಸಿದ್ದಾರೆ. ಈ ಮೂವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಎಲ್ಲ ಕಥೆಗಳಿಗೂ ಒಂದೇ ಕ್ಲೈಮ್ಯಾಕ್ಸ್

ನಾಲ್ಕು ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರನ್ನ ರಂಜಿಸುವ ‘ದಯವಿಟ್ಟು ಗಮನಿಸಿ’ ಚಿತ್ರ ಒಂದೇ ಕ್ಲೈಮ್ಯಾಕ್ಸ್ ಮೂಲಕ ಜನರಿಗೆ ಶಾಕ್ ನೀಡುತ್ತೆ. ಯಾಕಂದ್ರೆ, ಸಿನಿಮಾ ಮುಗಿಯಿತು ಎಂದು ಯಾರಿಗೂ ಗೊತ್ತಾಗಲ್ಲ. ಸಿನಿಮಾ ಮುಗಿದಿದ್ದರೂ, ಇನ್ನು ಮುಗಿದಿಲ್ಲ ಎಂಬ ನಿರೀಕ್ಷೆಯಿಂದ ಸೀಟಿನಲ್ಲಿ ಜನ ಕೂತಿರುತ್ತಾರೆ. ಕೊನೆಗೆ ಇನ್ನು ಏನೂ ಇರಬೇಕಿತ್ತು ಎಂಬ ಭಾವನೆಯಿಂದ ಹೊರಹೋಗ್ತಾರೆ.

ಇದು ಡೈರೆಕ್ಟರ್ ಶೋ

ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ರೋಹಿತ್ ಪದಕಿ ಒಂದೊಳ್ಳೆ ಸಿನಿಮಾ ನೀಡಿದ್ದಾರೆ. ಪೂರ್ತಿ ಕಮರ್ಷಿಯಲ್ ಆಗಿ ಮಾಡದೇ, ಪೂರ್ತಿ ಪ್ರಯೋಗವೂ ಮಾಡದೇ ಎರಡನ್ನೂ ಬ್ಯಾಲೆನ್ಸ್ ಮಾಡಿದ್ದಾರೆ. ನೋಡುಗರಿಗೆ ಬೋರ್ ಮಾಡಿಸಿದೆ, ಕ್ಲಾಸ್ ಆಗಿ ರಂಜಿಸಿದ್ದಾರೆ. ತಾವು ಹೇಳಬೇಕೆಂದಿದ್ದನ್ನ ಸ್ವಚ್ಛವಾಗಿ ತೆರೆ ಮೇಲೆ ತಂದು ಗಮನ ಸೆಳೆದಿದ್ದಾರೆ.

ಅನೂಪ್ ಆಲಾಪನೆ

‘ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುವ ಅಂಶಗಳಲ್ಲಿ ಅನೂಪ್ ಸೀಳಿನ್ ಅವರ ಸಂಗೀತ. ಚಿತ್ರದ ಎಲ್ಲ ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಅದರಲ್ಲೂ ‘ಮರೆತೆ ಹೋದೆನೂ ಮನೆಯ ದಾರಿಯ’ ಹಾಡು ಎಲ್ಲರ ಹೃದಯ ಮುಟ್ಟುತ್ತೆ. ಒಟ್ಟಾರೆ ಚಿತ್ರದಲ್ಲಿ ಅನೂಪ್ ಆಲಾಪನೆ ಅದ್ಭುತವಾಗಿದೆ.

ಚಿತ್ರದಲ್ಲಿ ಸ್ಪೆಷಲ್ ಏನು?

ಈ ಚಿತ್ರದಲ್ಲಿ ಸ್ಪೆಷಲ್ ಅಂದ್ರೆ, ಪಡ್ಡೆ ಹುಡುಗರಿಗೆ ಕಿಕ್ ಏರಿಸಲು ನಟಿ ಮೇಘನಾ ರಾಜ್ ಅವರ ಸ್ಪೆಷಲ್ ಸಾಂಗ್ ಇದೆ. ಇನ್ನು ವಿಶೇಷ ಅಂದ್ರೆ, ಚಿತ್ರದ ಸಂಭಾಷಣೆ. ಎರಡು ಮೂರು ಕಡೆ ಬೈಗುಳಗಳನ್ನ ಯಾವುದೇ ಮುಜುಗರ ಇಲ್ಲದೇ ಬೋಲ್ಡ್ ಆಗಿ ಬಳಸಿದ್ದಾರೆ. ಇನ್ನು ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ವರ್ಕ್ ಗೆ ಫುಲ್ ಮಾರ್ಕ್ಟ್.

ದಯವಿಟ್ಟು ನೋಡಲೇಕಾದ ಚಿತ್ರ

‘ದಯವಿಟ್ಟು ಗಮನಿಸಿ’ ಸಿನಿಮಾವನ್ನ ಸಾಮಾನ್ಯ ಜನರು ನೋಡಬೇಕು. ಯಾಕಂದ್ರೆ, ಇದು ನಿಮ್ಮ ಕಥೆ, ಈ ಚಿತ್ರದ ಯಾವುದಾದರೂ ಒಂದು ಪಾತ್ರ ನಿಮ್ಮನ್ನ ಹೋಲಬಹುದು. ಇನ್ನುಳಿದಂತೆ ಕಥೆ ಇದೆ, ಮನರಂಜನೆ ಸೇರಿದೆ. ನೈಜತೆಯಿಂದ ಮೂಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ಬೋಲ್ಡ್ ಆಗಿದೆ. ಸೋ ದಯವಿಟ್ಟು ಸಿನಿಮಾ ನೋಡೋದು ಮಿಸ್ ಮಾಡ್ಕೋಬೇಡಿ.