Photo3 12 1515751979

ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಜನವರಿ 25 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷ ಬಂದ್ ನಲ್ಲಿ ಭಾಗಿ ಆಗಲಿವೆ.

ಸದಾ ರೈತರ ಪರವಾಗಿ ನಿಲ್ಲುವ ಕನ್ನಡ ಸಿನಿಮಾರಂಗ ಕೂಡ ಕರ್ನಾಟಕ ಬಂದ್ ನಲ್ಲಿ ಕೈ ಜೋಡಿಸಲಿದೆ. ಇದೇ ಕಾರಣದಿಂದಾಗಿ ಜ 25 ಚಿತ್ರರಂಗ ಬಂದ್ ಆಗಲಿದೆ. ಕರ್ನಾಟಕ ಬಂದ್ ಆದಮೇಲೆ ಚಿತ್ರರಂಗವೂ ಬಂದ್ ಆಗಲಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ತಿಳಿಸಿದ್ದಾರೆ.

ಜನವರಿ 25ರಂದು ಸಿನಿಮಾ ತಾರೆಯರು ಕೂಡ ರಸ್ತೆಗಿಳಿದು ಹೋರಾಟ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಸಿನಿಮಾ ಸ್ಟಾರ್ ಗಳು ಹೋರಾಟದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಆರೋಪಗಳನ್ನ ತಳ್ಳಿ ಹಾಕಿರುವ ಸಿನಿಮಾ ತಾರೆಯರು ಈ ಬಾರಿ ನರಗುಂದಕ್ಕೂ ಬಂದು ಪ್ರತಿಭಟನೆ ಮಾಡುವುದಾಗಿ ಈ ಹಿಂದೆಯೇ ತಿಳಿಸಿದ್ದರು.

ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಮಾತು ಕತೆಗಳು ನಡೆಯುತ್ತಿದ್ದು ಜನವರಿ ೨೫ರಂದೇ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಬೆಂಗಳೂರಿನಲ್ಲೇ ಹೋರಾಟ ಮಾಡುತ್ತಾರಾ ಅಥವಾ ಒಂದು ದಿನಾಂಕ ನಿಗಧಿ ಮಾಡಿಕೊಂಡು ನರಗುಂದದಲ್ಲಿ ರ್ಯಾಲಿ ಮಾಡುತ್ತಾರಾ ಅನ್ನುವುದು ಇನ್ನ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಒಟ್ಟಾರೆ ಪ್ರತಿ ಬಾರಿಯಂತೆ ಈ ಸಲವೂ ರೈತರ ಹೋರಾಟಕ್ಕೆ ಕನ್ನಡ ಸಿನಿಮಾ ತಾರೆಯರು ಹಾಗೂ ಇಡೀ ಚಿತ್ರರಂಗ ಕೈ ಜೋಡಿಸಲಿದೆ.