2′ (ದಂಡುಪಾಳ್ಯ 2) ಸಿನಿಮಾ ‘ದಂಡುಪಾಳ್ಯ’ ಚಿತ್ರದ ಮುಂದುವರಿದ ಭಾಗ. ಮೊದಲ ಭಾಗದಲ್ಲಿ ದಂಡುಪಾಳ್ಯ ಗ್ಯಾಂಗ್ ನ ಕೌರ್ಯತೆ ಕಂಡಿದ್ದ ಪ್ರೇಕ್ಷಕರಿಗೆ ಈ ಬಾರಿ ಅವರ ಇನ್ನೊಂದು ಮುಖ ದರ್ಶನವನ್ನು ಮಾಡಿಸುವ ಸಿನಿಮಾ ಇದು. ಇಡೀ ಸಿನಿಮಾ ‘ದಂಡುಪಾಳ್ಯ’ ಗ್ಯಾಂಗ್ ಮಾಡಿದ ಅಪರಾಧಗಳ ಸತ್ಯ-ಸುಳ್ಳಿನ ತರ್ಕವಾಗಿದೆ.

Rating: 3.5/5
ಚಿತ್ರ: ‘2’ (ದಂಡುಪಾಳ್ಯ 2)
ನಿರ್ಮಾಣ: ವೆಂಕಟ್
ನಿರ್ದೇಶಕ: ಶ್ರೀನಿವಾಸ್ ರಾಜು
ಸಂಗೀತ ನಿರ್ದೇಶನ: ಅರ್ಜುನ್ ಜನ್ಯ
ಸಂಕಲನ : ಸಿ.ರವಿಚಂದ್ರನ್
ತಾರಾಗಣ: ಪೂಜಾಗಾಂಧಿ, ರವಿಶಂಕರ್, ಶೃತಿ, ಮಕರಂದ್ ದೇಶಪಾಂಡೆ, ಸಂಜನಾ ಗರ್ಲಾನಿ, ರವಿಕಾಳೆ, ಕರಿಸುಬ್ಬು ಮತ್ತು ಇತರರು
ಬಿಡುಗಡೆ: ಜುಲೈ 14, 2017

ಇನ್ನೊಂದು ಮುಖ
‘ದಂಡುಪಾಳ್ಯ’ ಗ್ಯಾಂಗ್ ಅಂದರೆ ನರರಾಕ್ಷಸರು ಅಂತ ತೋರಿಸಿದ್ದ ನಿರ್ದೇಶಕರು. ಈ ಬಾರಿ ಅವರ ಅಂತಹ ಮನಃಸ್ಥಿತಿಗೆ ಕಾರಣ ಮತ್ತು ಅವರ ಒಳ್ಳೆಯತನಗಳನ್ನು ತೋರಿಸಿದ್ದಾರೆ. ಈ ಸಿನಿಮಾದಲ್ಲಿ ‘ದಂಡುಪಾಳ್ಯ’ ತಂಡದ ಇನ್ನೊಂದು ಮುಖ ಬಹಿರಂಗವಾಗಿದೆ.

ಸತ್ಯ – ಸುಳ್ಳು
ಸಿನಿಮಾದ ಕಥೆ, ದಂಡುಪಾಳ್ಯ ತಂಡ ನಿಜವಾಗಿಯೂ ಅಷ್ಟೊಂದು ಕೊಲೆಗಳನ್ನು ಮಾಡಿತ್ತಾ..? ಎಂಬುದರ ಕುರಿತಾಗಿದೆ. ಇಡೀ ತನಿಖೆಯಲ್ಲಿ ನಡೆದ ಲೋಪದೋಷಗಳು ಹಾಗೂ ಈ ಘಟನೆಯಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬ ಅಂಶಗಳನ್ನು ಒಳಗೊಂಡಿದೆ.

ಫ್ಲಾಶ್ ಬ್ಯಾಕ್ ಸ್ಟೋರಿ
ಈ ಸಿನಿಮಾ ದಂಡುಪಾಳ್ಯದ ಮುಂದಿವರೆದ ಭಾಗವಾದರೂ ಚಿತ್ರದಲ್ಲಿನ ಕಥೆ ಫ್ಲಾಶ್ ಬ್ಯಾಕ್ ಸ್ಟೋರಿ. ಕೋರ್ಟ್ ನಲ್ಲಿ ದಂಡುಪಾಳ್ಯ ತಂಡಕ್ಕೆ ಶಿಕ್ಷೆಯಾಗುತ್ತದೆ. ಬಳಿಕ ಇನ್ನೇನು ಅವರ ಕಥೆ ಮುಗಿಯಿತು ಎನ್ನುವ ಸಮಯಕ್ಕೆ ಪತ್ರಕರ್ತೆ ಅಭಿ (ಶೃತಿ) ಮತ್ತೆ ಅವರ ಬಗ್ಗೆ ರಿಸರ್ಚ್ ಶುರು ಮಾಡಿ ಸತ್ಯವನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಆಗ ದಂಡುಪಾಳ್ಯ ಗ್ಯಾಂಗ್ ಹಿಂದಿನ ಇನ್ನೊಂದು ಮುಖ ತೆರೆದುಕೊಳ್ಳುತ್ತದೆ.

ಯೂ ಟರ್ನ್
ಈ ಚಿತ್ರ ದಂಡುಪಾಳ್ಯ ತಂಡದ ಬಗ್ಗೆ ಇದ್ದ ಭಾವನೆ ಬದಲಾಯಿಸುತ್ತದೆ. ಕೂಲಿ ಮಾಡುವುದಕ್ಕೆ ಬೆಂಗಳೂರಿಗೆ ಬಂದ ಅಮಾಯಕ ಗುಂಪು ಹೇಗೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸುತ್ತದೆ ಎಂಬ ರೋಚಕ ಕಥೆ ಇಲ್ಲಿದೆ. ಜೊತೆಗೆ ಇಡೀ ಘಟನೆಗೆ ಒಬ್ಬ ಪೊಲೀಸ್ ಅಧಿಕಾರಿ ಕಾರಣ ಎಂದು ಚಿತ್ರದಲ್ಲಿ ತೋರಿಸಲಾಗಿದೆ.

ಸರಿ – ತಪ್ಪು
ಚಿತ್ರದ ಹಿಂದಿನ ಭಾಗ ದಂಡುಪಾಳ್ಯ ತಂಡದ ಪಾಪಗಳ ಬಗ್ಗೆ ಇತ್ತು. ಇಲ್ಲಿ ಅವರ ಒಳ್ಳೆಯತನವನ್ನು ಬಿಂಬಿಸಿದ್ದಾರೆ. ಜೊತೆಗೆ ಪೊಲೀಸ್ ಅಧಿಕಾರಿಯ ಕ್ರೌರ್ಯ ಮತ್ತು ಆ ಅಧಿಕಾರಿಯೇ ನಟೋರಿಯಸ್ ದಂಡುಪಾಳ್ಯ ಗ್ಯಾಂಗ್ ಸೃಷ್ಟಿಗೆ ಕಾರಣ ಎಂಬುದು ಚಿತ್ರದಲ್ಲಿ ಹೇಳಲಾಗಿದೆ.

ನಟನೆ ಅಮೋಘ
ದಂಡುಪಾಳ್ಯ ಇಡೀ ತಂಡದ ನಟನೆ ತುಂಬ ನೈಜವಾಗಿ ಮೂಡಿಬಂದಿದೆ. ಅದರಲ್ಲಿಯೂ ಪೂಜಾಗಾಂಧಿ ಮತ್ತು ಮಕರಂದ್ ದೇಶಪಾಂಡೆ ಅಭಿನಯ ಗಮನ ಸೆಳೆಯುತ್ತದೆ. ಪೊಲೀಸ್ ಪಾತ್ರದಲ್ಲಿ ನಟಿಸಿರುವ ರವಿಶಂಕರ್ ನಟ ಭಯಂಕರ ಅಂತ ಮತ್ತೆ ಸಾಬೀತು ಮಾಡಿದ್ದಾರೆ.

ಕ್ಷಣ ಕ್ಷಣ ಕೌತುಕ
ಸಿನಿಮಾದ ಕ್ಷಣ ಕ್ಷಣವೂ ಕುತೂಹಲದಿಂದ ಕೂಡಿದೆ. ಎಲ್ಲೂ ಬೋರ್ ಅನಿಸಲ್ಲ. ಬೇಡದ ದೃಶ್ಯಗಳನ್ನೂ ತುರುಕಿಲ್ಲ. ಆದರೆ ಚಿತ್ರದ ಮೊದಲ ಭಾಗ ಮತ್ತು ಈ ಭಾಗದ ಕೆಲ ಅಂಶಗಳು ಅಲ್ಲಲ್ಲಿ ಗೊಂದಲ ಉಂಟು ಮಾಡುತ್ತದೆ. ಉಳಿದಂತೆ ಅರ್ಜುನ್ ಜನ್ಯ ಬ್ಯಾಕ್ ಗ್ರೌಂಡ್ ಸ್ಕೋರ್ ಚಿತ್ರದ ಖದರ್ ಹೆಚ್ಚು ಮಾಡುತ್ತದೆ

ನಿರ್ದೇಶನದ ಬಗ್ಗೆ
ನಿರ್ದೇಶಕ ಶ್ರೀನಿವಾಸ ರಾಜು ಸಿನಿಮಾವನ್ನು ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಆದರೆ ಸಿನಿಮಾದಲ್ಲಿ ಅವರು ತೋರಿಸಿದ ಪೊಲೀಸ್ ತನಿಖೆಗೆ ಸಂಬಂಧಿಸಿದ ಕೆಲ ಅಂಶಗಳು ಮುಂದೆ ಚರ್ಚೆ ಆದರೂ ಆಗಬಹುದು.

‘3’ ಬರುತ್ತೆ
ದಂಡುಪಾಳ್ಯ ಮೊದಲ ಭಾಗವನ್ನು ನೋಡಿದ ಪ್ರೇಕ್ಷಕರಿಗೆ ಈ ಚಿತ್ರವೂ ಇಷ್ಟ ಆಗುತ್ತದೆ. ಇಡೀ ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದೆ. ಇಲ್ಲಿ ಬರೀ ದಂಡುಪಾಳ್ಯ ತಂಡದ ಕ್ರೌರ್ಯಕ್ಕೆ ಕಾರಣವನ್ನು ಹೇಳಿದ್ದು, ದಂಡುಪಾಳ್ಯ ‘3’ ಸಿನಿಮಾ ಬರಲಿದೆ ಅಂತ ಹೇಳಿ ಸಿನಿಮಾ ಅಂತ್ಯವಾಗುತ್ತದೆ.