ಬರೀ ಮನರಂಜನೆಗಾಗಿ ಸಿನಿಮಾ ನೋಡುವವರಿಗೆ ‘ಕರಿಯ 2’ ಒಂದು ಉತ್ತಮ ಆಯ್ಕೆ. ಲವ್, ಆಕ್ಷನ್, ಸೆಂಟಿಮೆಂಟ್, ಕಾಮಿಡಿ, ರೌಡಿಸಂ ಹೀಗೆ ಎಲ್ಲ ಅಂಶಗಳು ಇರುವ ‘ಕರಿಯ-2’ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ.
Rating: 3.0/5
ಚಿತ್ರ: ಕರಿಯ 2
ನಿರ್ಮಾಣ: ಆನೇಕಲ್ ಬಾಲರಾಜ್
ನಿರ್ದೇಶನ: ಪ್ರಭು ಶ್ರೀನಿವಾಸ್
ಸಂಗೀತ: ಕರಣ್
ಛಾಯಾಗ್ರಹಣ : ಶ್ರೀನಿವಾಸ್
ತಾರಾಗಣ: ಸಂತೋಷ್, ಮಯೂರಿ, ಸಾಧು ಕೋಕಿಲ ಮತ್ತಿತರರು.
ಬಿಡುಗಡೆ: ಅಕ್ಟೋಬರ್ 13 ‘

ಕರಿಯ’ನ ಕಹಾನಿ

ಚಿಕ್ಕ ವಯಸ್ಸಿನಲ್ಲಿ ತಾಯಿ ಕಳೆದುಕೊಂಡಿದ್ದ ನಾಯಕ ಕರಿಯ (ಸಂತೋಷ್) ದೊಡ್ಡವನಾಗಿ ರೌಡಿಸಂ ಗ್ಯಾಂಗ್ ಸೇರಿಕೊಳ್ಳುತ್ತಾನೆ. ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡುವ ‘ಕರಿಯ’ನಿಗೆ ತಾಯಿ ಅಂದರೆ ಪ್ರಾಣ. ತಾನಾಯ್ತು, ತನ್ನ ಹೊಡೆದಾಟವಾಯಿತು ಎಂದು ಇರುವ ಕರಿಯನ ಜೀವನಕ್ಕೆ ನಾಯಕಿ ಜಾನು (ಮಯೂರಿ) ಎಂಟ್ರಿಯಾಗುತ್ತಾಳೆ. ರೌಡಿ ಕರಿಯನನ್ನು ಪ್ರೀತಿಸಿ ನಂತರ ಅವನನ್ನೇ ಕೊಲೆ ಮಾಡಲು ಜಾನು ಹೊರಡುತ್ತಾಳೆ. ತಾನು ಪ್ರೀತಿಸಿದ ಕರಿಯನನ್ನೇ ಜಾನು ಯಾಕೆ ಕೊಲ್ಲುವುದಕ್ಕೆ ಹೊರಡುತ್ತಾಳೆ.? ಮುಂದೆ ಈ ಪ್ರೇಮಿಗಳ ಕಥೆ ಏನು ಆಯ್ತು ಎನ್ನುವುದೇ ಚಿತ್ರದ ಕಥೆ.

ಕಥೆ ಅದೇ.. ರೀತಿ ಬೇರೆ

ಹಾಗೆ ನೋಡಿದರೆ ‘ಕರಿಯ 2’ ಸಿನಿಮಾದ ಕಥೆಯಲ್ಲಿ ಅಂಥ ವಿಶೇಷವಾಗಿರುವುದು ಏನೂ ಇಲ್ಲ. ಆದರೆ ನಿರೂಪಣೆಯಲ್ಲಿ ವಿಭಿನ್ನತೆ ಇದೆ. ಅದೇ ರೌಡಿಸಂ.. ಅದೇ ಲವ್ ಸ್ಟೋರಿ.. ಎರಡನ್ನೂ ಮಿಶ್ರಣ ಮಾಡಿರುವ ಅನೇಕ ಚಿತ್ರಗಳು ಈಗಾಗಲೇ ಬಂದಿವೆ. ಆದರೆ ಈ ಚಿತ್ರದ ಕಥೆಯನ್ನು ಹೇಳಿರುವ ರೀತಿ ಇಂಟ್ರೆಸ್ಟಿಂಗ್ ಆಗಿದೆ. ಪದೇ ಪದೇ ಬರುವ ಫ್ಲಾಶ್ ಬ್ಯಾಕ್ ಗಳ ಮೂಲಕ ಚಿತ್ರ ಕಥೆ ಸಾಗುತ್ತದೆ. ಇದು ನೋಡುಗರನ್ನು ಬೋರ್ ಆಗದಂತೆ ಕೂರಿಸುತ್ತದೆ.

ಮಾಸ್ ಕರಿಯ, ಕ್ಲಾಸ್ ಜಾನು

ಕರಿಯನ ಪಾತ್ರದಲ್ಲಿ ನಟಿಸಿರುವ ನಟ ಸಂತೋಷ್ ಅವರ ಪಾತ್ರವನ್ನ ಚೆನ್ನಾಗಿ ನಿಭಾಯಿಸಿದ್ದಾರೆ. ಮಯೂರಿ ಪಾತ್ರಕ್ಕೂ ಕಥೆಯಲ್ಲಿ ಪ್ರಾಮುಖ್ಯತೆ ಇದೆ. ಕರಿಯನ ರಾಣಿಯಾಗಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ ಮಯೂರಿ.

ಆಕ್ಷನ್, ಕಾಮಿಡಿ, ಸೆಂಟಿಮೆಂಟ್

ಸಿನಿಮಾದ ಹೈಲೆಟ್ ಅಂದರೆ ಆಕ್ಷನ್. ಚಿತ್ರ ಪ್ರಾರಂಭದಿಂದ ಹಿಡಿದು ಬೇಕಾದಷ್ಟು ಸಾಹಸ ದೃಶ್ಯಗಳು ಇದ್ದು, ಮಾಸ್ ಪ್ರೇಕ್ಷಕರ ಮನ ತಣಿಸುತ್ತದೆ. ಸಾಧು ಕೋಕಿಲ ಕಾಮಿಡಿ ಮುಖದಲ್ಲಿ ನಗು ಮೂಡಿಸುತ್ತದೆ. ಜೊತೆಗೆ ತಾಯಿಯ ಕೆಲ ಸೆಂಟಿಮೆಂಟ್ ದೃಶ್ಯಗಳು ಸಿನಿಮಾವನ್ನು ಪ್ರೇಕ್ಷಕರಿಗೆ ಹತ್ತಿರವಾಗುವಂತೆ ಮಾಡುತ್ತದೆ.

ಹೆಸರು ಉಳಿಸಿದೆ

ನಿರ್ದೇಶನ ಪ್ರಭು ಶ್ರೀನಿವಾಸ್ ಆ ‘ಕರಿಯ’ ಚಿತ್ರದ ಟೈಟಲ್ ಗೆ ನ್ಯಾಯ ಒದಗಿಸಿದ್ದಾರೆ. ಸಾಮಾನ್ಯ ಪ್ರೇಕ್ಷಕನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಥೆ ಮಾಡಿ, ಅದನ್ನು ಅವರಿಗೆ ಇಷ್ಟ ಆಗುವ ಶೈಲಿಯಲ್ಲಿ ಹೇಳಿದ್ದಾರೆ.

ಮ್ಯೂಸಿಕ್, ಕ್ಯಾಮರಾ

ಚಿತ್ರದ ಮ್ಯೂಸಿಕ್ ಸಾಧಾರಣವಾಗಿದೆ. ಎರಡು ಹಾಡು ಪದೇ ಪದೇ ಕೇಳಬೇಕು ಎನಿಸುತ್ತದೆ. ಉಳಿದ ಹಾಡುಗಳು ಅಷ್ಟು ಹಿಡಿಸುವುದಿಲ್ಲ. ಕ್ಯಾಮರಾ ವರ್ಕ್ ಉತ್ತಮವಾಗಿದ್ದು, ಚಿತ್ರದ ಮೆರುಗನ್ನು ಹೆಚ್ಚಿಸಿದೆ.

ಕೊಟ್ಟ ಹಣಕ್ಕೆ ಮೋಸ ಇಲ್ಲ

ಟಿಕೆಟ್ ಪಡೆದು ಸೀಟ್ ಮೇಲೆ ಕುಳಿತ ಪ್ರೇಕ್ಷಕನಿಗೆ ‘ಕರಿಯ 2’ ಮೋಸ ಮಾಡುವುದಿಲ್ಲ. ತೀರ ಅದ್ಭುತ ಅಲ್ಲದ.. ಇತ್ತ ಕಳಪೆಯೂ ಅಲ್ಲದ.. ಒಂದು ಉತ್ತಮ ಸಿನಿಮಾ ‘ಕರಿಯ 2’.