ಒಂದು ಕಥೆಯನ್ನು ಸಿನಿಮಾ ರೂಪದಲ್ಲಿ ಎರಡು ಭಾಗಗಳಲ್ಲಿ ಹೇಳಲು ಹೊರಟಾಗ ಎರಡರ ನಡುವೆ ಹೆಚ್ಚೆಂದರೆ ನಾಲ್ಕೈದು ತಿಂಗಳು ಗ್ಯಾಪ್ ಇರುತ್ತದೆ. ಆದರೆ ಇಲ್ಲಿ ಎರಡನೇ ಭಾಗವನ್ನು ಸರಿಸುಮಾರು ಎರಡು ವರ್ಷ ಕಾಲ ಪ್ರೇಕ್ಷಕರು ನಿರೀಕ್ಷಿಸುವಂತೆ ಮಾಡಿತು. ಅದೇ ಬಾಹುಬಲಿ 2: ದಿ ಕನ್‌‍ಕ್ಲೂಜನ್. ‘ಬಾಹುಬಲಿ: ದಿ ಬಿಗಿನಿಂಗ್’ ನೋಡಿದ ಪ್ರೇಕ್ಷಕರು ಇಷ್ಟಕ್ಕೂ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬ ಪ್ರಶ್ನೆಯೊಂದಿಗೆ ಥಿಯೇಟರ್‌ನಿಂದ ಹೊರಬಂದಿದ್ದರು. ಇದೇ ಪ್ರಶ್ನೆ ಇಡೀ ಜಗತ್ತಿಗೆ ವ್ಯಾಪಿಸಿತು. ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕೆಂದು ಪ್ರತಿಯೊಬ್ಬ ಪ್ರೇಕ್ಷಕನೂ ಎಷ್ಟೋ ದಿನಗಳಿಂದ ಎದುರು ನೋಡುತ್ತಿದ್ದ ಗಳಿಗೆ ಬಂದೇ ಬಿಡ್ತು. ಏಪ್ರಿಲ್ 28ರಂದು ‘ಬಾಹುಬಲಿ : ದಿ ಕನ್‌ಕ್ಲೂಜನ್’ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಇಷ್ಟಕ್ಕೂ ಸಿನಿಮಾ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

ಕಥೆ:
ಕಾಲಕೇಯನನ್ನು ಕೊಂದ ಬಳಿಕ ಮಾಹಿಷ್ಮತಿ ಸಾಮ್ರಾಜ್ಯಕ್ಕೆ ರಾಜನನ್ನಾಗಿ ಶಿವಗಾಮಿ (ರಮ್ಯಕೃಷ್ಣ), ಅಮರೇಂದ್ರ ಬಾಹುಬಲಿ (ಪ್ರಭಾಸ್) ಯನ್ನು ಘೋಷಿಸುತ್ತಾಳೆ. ಇನ್ನೇನು ಸ್ವಲ್ಪ ದಿನಗಳಲ್ಲಿ ಪಟ್ಟ ಅಲಂಕರಿಸಲಿರುವ ಬಾಹುಬಲಿಯನ್ನು ಪ್ರಜೆಗಳ ಕಷ್ಟ ತಿಳಿದುಕೊಳ್ಳಲು ಶಿವಗಾಮಿ ದೇಶಪರ್ಯಟನೆಗೆ ಕಳುಹಿಸುತ್ತಾಳೆ. ಬಾಹುಬಲಿಯೊಂದಿಗೆ ಕಟ್ಟಪ್ಪ (ಸತ್ಯರಾಜ್) ಸಹ ಹೊರಡುತ್ತಾನೆ. ಮಾರ್ಗ ಮಧ್ಯದಲ್ಲಿ ಕೆಲವು ಆಗಂತುಕರೊಂದಿಗೆ ಹೋರಾಡುತ್ತಿರುವ ಕುಂತಲ ದೇಶದ ಯುವರಾಣಿ ದೇವಸೇನಾ (ಅನುಷ್ಕಾ ಶೆಟ್ಟಿ) ಯನ್ನು ನೋಡಿ ಬಾಹುಬಲಿ ಇಷ್ಟಪಡುತ್ತಾನೆ. ಕುಂತಲ ರಾಜ್ಯದಲ್ಲಿ ಸ್ಥಾನ ಸಂಪಾದಿಸಲು ಮಂದಬುದ್ಧಿಯ ವ್ಯಕ್ತಿಯಾಗಿ ಪ್ರವರ್ತಿಸುತ್ತಾನೆ. ಆದರೆ ಮಾಹಿಷ್ಮತಿ ಸಾಮ್ರಾಜ್ಯವನ್ನು ಸ್ವಂತ ಮಾಡಿಕೊಳ್ಳಬೇಕೆಂದಿದ್ದ ಬಲ್ಲಾಳದೇವ (ರಾಣಾ), ದೇವಸೇನಾಳನ್ನು ಬಾಹುಬಲಿ ಇಷ್ಟಪಡುತ್ತಿದ್ದಾನೆಂದು ತಿಳಿದುಕೊಂಡು ಆಕೆಯನ್ನು ತನ್ನ ವಶ ಮಾಡಿಕೊಳ್ಳಬೇಕೆನ್ನುತ್ತಾನೆ. ಅದಕ್ಕೆ ತನ್ನ ತಾಯಿ ಶಿವಗಾಮಿಯಿಂದ ಅನುಮತಿ ಪಡೆಯಲು ಯೋಜನೆ ರೂಪಿಸುತ್ತಾನೆ.

ಬಲ್ಲಾಳದೇವನಿಗೆ ದೇವಸೇನಾಳನ್ನು ಕೊಟ್ಟು ಮದುವೆ ಮಾಡಬೇಕೆಂದು ಶಿವಗಾಮಿ.. ದೇವಸೇನಾ, ಬಾಹುಬಲಿಯನ್ನು ಇಷ್ಟಪಡುತ್ತಿದ್ದಾಳೆಂದು ತಿಳಿದುಕೊಂಡು ರಾಜ್ಯ ಬೇಕೋ… ದೇವಸೇನಾ ಬೇಕೋ…ನಿರ್ಧರಿಸಿಕೊಳ್ಳುವಂತೆ ಬಾಹುಬಲಿಗೆ ಹೇಳುತ್ತಾಳೆ. ದೇವಸೇನಾಗೆ ಮಾತುಕೊಟ್ಟ ಕಾರಣ ಬಾಹುಬಲಿ ತನ್ನ ತಾಯಿ ಶಿವಗಾಮಿ ವಿರುದ್ಧ ಮಾತನಾಡುತ್ತಾನೆ. ಇದರಿಂದ ರಾಜ್ಯಾಧಿಕಾರ ಬಲ್ಲಾಳದೇವನಿಗೆ ದಕ್ಕುತ್ತದೆ. ಆದರೂ ಪ್ರಜೆಗಳಲ್ಲಿ ಬಾಹುಬಲಿ ಮೇಲಿನ ನಂಬಿಕೆ, ಅಭಿಮಾನ ಬಲ್ಲಾಳದೇವನಿಗೆ ಮನಶ್ಯಾಂತಿ ಇಲ್ಲದಂತೆ ಮಾಡುತ್ತದೆ. ತನ್ನ ಸಂತೋಷಕ್ಕಾಗಿ ಬಲ್ಲಾಳದೇವ ಏನು ಮಾಡುತ್ತಾನೆ..? ಕಟ್ಟಪ್ಪನೊಂದಿಗೆ ಕೈಜೋಡಿಸಿ ಬಾಹುಬಲಿಯನ್ನು ಹೇಗೆ ಕೊಂದ..? ಅದಕ್ಕೆ ರಾಜಮಾತೆ ಶಿವಗಾಮಿ ಹೇಗೆ ಅಂಗೀಕರಿಸಿದಳು..? ಬಲ್ಲಾಳದೇವನ ಅಕ್ರಮಗಳಿಗೆ ಅಂತ್ಯ ಹಾಡಿದ್ದು ಯಾರು..? ಈ ಪ್ರಶ್ನೆಗಳಿಗೆ ಉತ್ತರವೇ ಈ ‘ಬಾಹುಬಲಿ: ದಿ ಕನ್‌ಕ್ಲೂಜನ್’.

ವಿಮರ್ಶೆ:
ಅಮರೇಂದ್ರ ಬಾಹುಬಲಿ ಪುತ್ರ ಮಹೇಂದ್ರ ಬಾಹುಬಲಿಗೆ (ಶಿವುಡು) ತನ್ನ ತಂದೆಯ ಹಿನ್ನೆಲೆ ಹೇಳುವುದು, ಬಾಹುಬಲಿಯನ್ನು ತಾನೇ ಸಾಯಿಸಿದೆ ಎಂದು ಕಟ್ಟಪ್ಪ ಹೇಳುವ ಮೂಲಕ ಸಿನಿಮಾದ ಮೊದಲ ಭಾಗ ಮುಗಿಯುತ್ತದೆ. ಈ ಸಿನಿಮಾ ಬಿಡುಗಡೆಯಾಗಿ ಸರಿಯಾಗಿ ಎರಡು ವರ್ಷಗಳಾಗುತ್ತಿವೆ. ಆದರೂ ಭಾಗ 2ಕ್ಕಾಗಿ ಅಭಿಮಾನಿಗಳು ಯಾವುದೇ ಬೇಸರವಿಲ್ಲದೆ ನೋಡುತ್ತಿದ್ದಾರೆಂದರೆ ಅದಕ್ಕೆ ಕಾರಣ ರಾಜಮೌಳಿ. ಸುಮಾರು ಏಳೆಂಟು ಪ್ರಶ್ನೆಗಳಿಂದ ಕೂಡಿದ ಸಿನಿಮಾವನ್ನು ಮಾಡಿ ಭರ್ಜರಿ ಹಿಟ್ ದಾಖಲಿಸಿದ ಘನತೆ ಅವರಿಗೆ ದಕ್ಕುತ್ತದೇನೋ. ಎರಡನೇ ಭಾಗಕ್ಕೆ ಇಷ್ಟೆಲ್ಲಾ ಗ್ಯಾಪ್ ಬಂದರೂ… ಕಟ್ಟಪ್ಪನನ್ನು ಬಾಹುಬಲಿ ಯಾಕೆ ಕೊಂದ ಎಂಬ ಸಂಗತಿಯ ಬಗ್ಗೆ ಪ್ರೇಕ್ಷಕರಲ್ಲಿ ಆಸಕ್ತಿ ಹೋಗದಂತೆ ಭಾವನಾತ್ಮಕವಾಗಿ ಎಲ್ಲರೂ ಎದುರುನೋಡುವಂತೆ ಮಾಡಿದರು. ಸಿನಿಮಾ ಮೊದಲ ಭಾಗದಲ್ಲಿ ಇಲ್ಲದ ಭಾವೋದ್ವೇಗಗಳು, ಮನರಂಜನೆಯನ್ನು ಎರಡನೇ ಭಾಗದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಬಾಹುಬಲಿ 2 ಮೊದಲರ್ಧದಲ್ಲಿ ಒಟ್ಟಾರೆ ಪ್ರಭಾಸ್, ಅನುಷ್ಕಾರ ಪ್ರೇಮಕಥೆಯೊಂದಿಗೆ ಸುಬ್ಬುರಾಜು ಜತೆಗೆ ಮಾಡಿಸಿದ್ದ ಕಾಮಿಡಿ, ಯುದ್ಧ ಸನ್ನಿವೇಶಗಳನ್ನು ತೋರಿಸಿದ್ದರು. ಪ್ರಭಾಸ್, ಅನುಷ್ಕಾ ನಡುವಿನ ಟ್ರ್ಯಾಕ್ ಇಷ್ಟವಾದರೂ ಕಾಮಿಡಿ ಹೇಳಿಕೊಳ್ಳುವಂತಿರಲಿಲ್ಲ. ಈ ರೀತಿಯ ಕಥೆಗಳಲ್ಲಿ ಕಾಮಿಡಿಯನ್ನು ಪ್ರೇಕ್ಷಕರು ಬಯಸುವುದೂ ಇಲ್ಲ. ಆದರೂ ಕಮರ್ಷಿಯಲ್ ಎಲಿಮೆಂಟ್ಸ್‌ಗಾಗಿ ಸ್ವಲ್ಪ ಕಾಮಿಡಿ ಟಚ್ ಕೊಟ್ಟಿದ್ದಾರೆ. ಸಿನಿಮಾ ಆರಂಭವಾದ 15 ನಿಮಿಷಗಳ ತನಕ ಎಲ್ಲವೂ ರೂಟೀನ್ ಆಗಿ ಸಾಗುತ್ತದೆ. ಪ್ರಭಾಸ್ ಇಂಟ್ರಡಕ್ಷನ್ ಸೀನ್ ಸಹ ಸ್ವಲ್ಪ ಅತಿಯಾಯಿತು ಅನ್ನಿಸುತ್ತದೆ. ಪ್ರಭಾಸ್‌ಗೆ ಹೋಲಿಸಿದರೆ ಅನುಷ್ಕಾ ಇಂಟ್ರಡಕ್ಷನ್ ಸೀನ್ ಇಷ್ಟವಾಗುತ್ತದೆ. ಕುಂತಲ ರಾಜ್ಯದ ಮೇಲೆ ಹಠಾತ್ ದಾಳಿ ನಡೆಯುವ ಹಿನ್ನೆಲೆಯಲ್ಲಿ ಬರುವ ಯುದ್ಧ ಸನ್ನಿವೇಶಗಳನ್ನು ಚೆನ್ನಾಗಿ ಚಿತ್ರೀಕರಿಸಲಾಗಿದೆ. ಮುಖ್ಯವಾಗಿ ಪ್ರಭಾಸ್, ಅನುಷ್ಕಾ ಜತೆಯಾಗಿ ಬಾಣಗಳನ್ನು ಹೂಡುವ ಸನ್ನಿವೇಶಗಳು ಅಳಿಸಲಾಗದ ಮುದ್ರೆ ಒತ್ತುತ್ತವೆ. ಸಿನಿಮಾದಲ್ಲಿ ಮಧ್ಯಂತರ ನಿರೀಕ್ಷಿಸಿದ ಮಟ್ಟದಲ್ಲಿಲ್ಲ.

ಇನ್ನು ಉತ್ತರಾರ್ಧದಲ್ಲಿ ಅನುಷ್ಕಾ, ರಮ್ಯಕೃಷ್ಣ ನಡುವಿನ ಸನ್ನಿವೇಶಗಳು ಹೈಲೈಟ್. ದೇವಸೇನಾ ಪಾತ್ರದಲ್ಲಿ ಅನುಷ್ಕಾ ಹೇಳುವ ಪ್ರತಿ ಡೈಲಾಗ್ ಇಷ್ಟವಾಗುತ್ತದೆ. ಶಿವಗಾಮಿಯನ್ನು ಎದುರಿಸಿ ಮಾತನಾಡುವ ಸನ್ನಿವೇಶ ಪ್ಲಸ್ ಪಾಯಿಂಟ್. ಈ ಎರಡು ಪಾತ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಪ್ರೀಕ್ಲೈಮ್ಯಾಕ್ಸ್, ಕ್ಲೈಮ್ಯಾಕ್ಸ್ ಸಹ ಯುದ್ಧಗಳೊಂದಿಗೆ ಕಳೆದುಹೋಗುತ್ತದೆ. ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ವಿಷಯ ಪ್ರೇಕ್ಷಕರ ಊಹೆಗೆ ಸಿಗುತ್ತದೆ. ಸಿನಿಮಾದಲ್ಲಿ ಬಾಹುಬಲಿ ಪಾತ್ರವನ್ನು ಎರಡು, ಮೂರು ಕಡೆ ಬಲ್ಲಾಳದೇವನ ಪಾತ್ರ ಡಾಮಿನೇಟ್ ಮಾಡಿದೆ. ರಾಣಾ ಮುಖದಲ್ಲಿ ರಾಜತನ ತುಂಬಿ ತುಳುಕುತ್ತಿರುತ್ತದೆ. ಬಾಹುಬಲಿಗೆ ಸೂಕ್ತ ಪ್ರತಿನಾಯಕನಾಗಿ ರಾಣಾ ಬಿಟ್ಟರೆ ಬೇರಾರೂ ನ್ಯಾಯ ಒದಗಿಸಲಾರರು. ಪ್ರಭಾಸ್, ರಾಣಾ, ಅನುಷ್ಕಾ, ರಮ್ಯಕೃಷ್ಣ, ಸತ್ಯರಾಜ್, ನಾಜರ್ ಪ್ರತಿಯೊಬ್ಬರೂ ತಮ್ಮ ನಟನೆಯ ಮೂಲಕ ಸಿನಿಮಾ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ತಾಂತ್ರಿಕವಾಗಿ ಸಿನಿಮಾ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಪ್ರತಿ ಫ್ರೇಮ್‌ನಲ್ಲೂ ವಿಜುವಲ್ ಎಫೆಕ್ಟ್ಸ್ ಮಾಯಾಜಾಲ ಕಾಣಿಸುತ್ತದೆ. ಅದಕ್ಕದೇ ಸಾಟಿ ಎಂಬಂತಿದೆ. ಗ್ರಾಫಿಕ್ ಸೀನ್‌ಗಳು ಮಾತ್ರ ಅತಿಯಾಗಿ ಕಾಣಿಸುತ್ತವೆ. ಹಿನ್ನೆಲೆ ಸಂಗೀತ ಚೆನ್ನಾಗಿದ್ದರೂ ಹಾಡುಗಳು ಮಾತ್ರ ಬಾಹುಬಲಿ ಭಾಗ 1ಕ್ಕೆ ಹೋಲಿಸಿದರೆ ಆವರೇಜ್ ಎನ್ನಬಹುದು. ರಾಜಮೌಳಿ ವಿಷನ್‌, ಅವರು ಅಂದುಕೊಂಡಂತೆ ತೆರೆಗೆ ತರುವುದರಲ್ಲಿ ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ ತನ್ನ ಕೆಲಸಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಸಿನಿಮಾ ಫಸ್ಟ್ ಆಫ್ ಭಾಗದಲ್ಲಿನ ಕೆಲವು ಸೀನ್‌ಗಳನ್ನು ಎಡಿಟ್ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಅದೇ ರೀತಿ ಸೆಕೆಂಡ್ ಆಫ್ ಸ್ವಲ್ಪ ನಿಧಾನಕ್ಕೆ ಸಾಗುತ್ತದೆ ಎಂಬ ಭಾವನೆ ಬರುತ್ತದೆ. ಒಟ್ಟಾರೆ ಬಾಹುಬಲಿ ದೃಶ್ಯಕಾವ್ಯವನ್ನು ತೆರೆ ಮೇಲೆ ಸೃಷ್ಟಿಸಿದ್ದರೂ…ಕಥೆಯ ದೃಷ್ಟಿಯಲ್ಲಿ ಆ ಹಂತಕ್ಕೆ ತಲುಪಲಿಲ್ಲ ಎಂದೇ ಹೇಳಬೇಕು. ಒಟ್ಟಾರೆ ಇದೊಂದು ಕ್ಲಾಸಿಕಲ್ ವಿಜುವಲ್ ವಂಡರ್.