”ದುಡ್ಡು ಹಾಕಿ ರಾಜಕಾರಣಕ್ಕೆ ಬಂದರೆ ದುಡ್ಡು ಮಾಡುವುದನ್ನು ನೋಡುತ್ತೇವೆ ಹೊರತು ದೇಶದ ಪ್ರಗತಿ ಸಾಧ್ಯ ಇಲ್ಲ. ಹೀಗಾಗಿ ದುಡ್ಡಿನ ರಾಜಕಾರಣ ಬೇಡ. ರಾಜರ ಕೈಯಲ್ಲಿ ಕೀ ಇರಬಾರದು. ಪ್ರಜೆಗಳ ಕೈಯಲ್ಲಿ ಕೀ ಇರಬೇಕು” ಎಂದು ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಬಗ್ಗೆ ಮಾತನಾಡುತ್ತಿರುವ ಉಪೇಂದ್ರ ‘ನಗ್ನಸತ್ಯ’ ಎಂಬ ಶೀರ್ಷಿಕೆ ಅಡಿ ತಮ್ಮ ಫೇಸ್ ಬುಕ್ ಲೈವ್ ಮೂಲಕ ನಗರದ ಅನೇಕ ಸಮಸ್ಯೆಗಳಿಗೆ ‘ಪ್ರಜೆ’ಗಳ ಮೂಲಕವೇ ಪರಿಹಾರ ಸೂಚಿಸುತ್ತಿದ್ದಾರೆ.

ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯ ಕಳಪೆ ಕಾಮಗಾರಿ ಹಾಗೂ ಅದಕ್ಕೆ ಪರಿಹಾರ ಸೂಚಿಸಿ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗ ಸೌರವ್ ಬಾಬು ಜೊತೆ ಬಗ್ಗೆ ಕಳೆದ ವಾರ ಫೇಸ್ ಬುಕ್ ಮೂಲಕ ಮೊಟ್ಟ ಮೊದಲ ಬಾರಿಗೆ ನಟ ಉಪೇಂದ್ರ ‘ನಗ್ನಸತ್ಯ – ಪಾರ್ಟ್ 1’ ಲೈವ್ ಮಾಡಿದ್ದರು.

ಸೌರವ್ ಬಾಬು ಸೂಚಿಸಿದ ‘ರೋಡ್ ಸೈಡ್ ಪೈಪ್ ಡ್ರೇನೇಜ್ ಸಿಸ್ಟಮ್’ ಐಡಿಯಾಗೆ ಸರ್ಕಾರದ ಅಧಿಕಾರಿಗಳು ಸ್ಪಂದಿಸಿದ್ದಾರಂತೆ. ಹಾಗಂತ ಸ್ವತಃ ನಟ ಉಪೇಂದ್ರ ತಿಳಿಸಿದ್ದಾರೆ.

”ನಿಮ್ಮೆಲ್ಲರಿಗೂ ಒಂದು ಗುಡ್ ನ್ಯೂಸ್. ಕಳೆದ ವಾರ ಸೌರವ್ ಬಾಬು ಬೆಂಗಳೂರಿನ ಒಳಚರಂಡಿ ವ್ಯವಸ್ಥೆಗೆ ಪರಿಹಾರ ಸೂಚಿಸಿ ಮಾತನಾಡಿದ್ದರು. ಈಗ ಸರ್ಕಾರದ ಅಧಿಕಾರಿಗಳು ಬಂದು ನಿಮಗೊಂದು ಪೈಲಟ್ ಪ್ರಾಜೆಕ್ಟ್ ಕೊಡುತ್ತೇವೆ ಎಂದಿದ್ದಾರೆ. ಕೆಲಸವನ್ನ ಸೌರವ್ ಶುರು ಮಾಡಿದ್ದಾರೆ” ಎಂದು ನಟ ಉಪೇಂದ್ರ ಹೇಳಿದ್ದಾರೆ.

”ಕಡಿಮೆ ದುಡ್ಡಿನಲ್ಲಿ ಒಂದೊಳ್ಳೆ ಡ್ರೈನೇಜ್ ಸಿಸ್ಟಮ್ ಬರೀ ಬೆಂಗಳೂರಿನಲ್ಲಿ ಮಾತ್ರ ಅಲ್ಲ ಹಲವು ನಗರಗಳಲ್ಲಿ ಮಾಡಬಹುದು. ಈ ಐಡಿಯಾಗಳನ್ನ ಇಟ್ಟುಕೊಂಡರೆ ಅದ್ಭುತ ಕರ್ನಾಟಕ ನಿರ್ಮಾಣ ಮಾಡಬಹುದು” ಎಂದು ಖುಷಿಯಿಂದ ಮಾತನಾಡಿದ್ದಾರೆ ಉಪೇಂದ್ರ.

ಅಲ್ಲಿಗೆ, ‘ಪ್ರಜಾಕೀಯ’ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿರುವ ಉಪೇಂದ್ರ ಪ್ರಯತ್ನಕ್ಕೆ ಮೊದಲ ಯಶಸ್ಸು ಸಿಕ್ಕಂತಾಗಿದೆ.