ಮಲೆನಾಡು ರೈತರ ‘ಕ್ರಾಂತಿಕಥೆ’ ಹೊಂಬಣ್ಣ

ಮಲೆನಾಡು ರೈತರ ‘ಕ್ರಾಂತಿಕಥೆ’ ಹೊಂಬಣ್ಣ

- in Reviews
95
0

ಮಲೆನಾಡು ಪ್ರವಾಸಿಗರ ಪಾಲಿಗೆ ಸ್ವರ್ಗ. ಅದೇ ಮಲೆನಾಡು ಮೂಲವಾಸಿಗರ ಪಾಲಿಗೆ ನರಕ. ಇದು ‘ಹೊಂಬಣ್ಣ’ ಚಿತ್ರದ ಒನ್ ಲೈನ್ ಸ್ಟೋರಿ. ಅರಣ್ಯ ರಕ್ಷಣೆ ಎಂಬ ಹೆಸರಿನಲ್ಲಿ ರೈತರನ್ನ ಒಕ್ಕಲೆಬ್ಬಿಸುವುದು ಎಷ್ಟು ಸರಿ ಎಂಬ ಗಂಭೀರ ಸಮಸ್ಯೆಯನ್ನ ಪ್ರಧಾನಕಥೆಯಾಗಿಟ್ಟು ಚಿತ್ರಕಥೆ ಮಾಡಲಾಗಿದೆ.

ಒಂದೆಡೆ ಮಲೆನಾಡಿನ ಆಚಾರ, ವಿಚಾರ, ಭೂತಾರಾಧನೆಯನ್ನ ಕಣ್ಣಿಗೆ ಕಟ್ಟಿಕೊಟ್ಟಿರುವ ‘ಹೊಂಬಣ್ಣ’, ಮತ್ತೊಂದೆಡೆ ಕಾನೂನಿನ ವಿರುದ್ಧ ಹೋರಾಟ, ಕ್ರಾಂತಿಯ ಮೂಲಕ ನೈಜ ಸಮಸ್ಯೆಯನ್ನ ಬೆಳ್ಳಿತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದೆ. ‘ಹೊಂಬಣ್ಣ’ ಚಿತ್ರದ ಪೂರ್ತಿ ವಿಮರ್ಶೆ ಮುಂದೆ ಓದಿ….

Rating: 3.0/5

ಚಿತ್ರ: ಹೊಂಬಣ್ಣ
ನಿರ್ಮಾಣ: ರಾಮಕೃಷ್ಣ ನಿಗಡೆ
ನಿರ್ದೇಶನ: ರಕ್ಷಿತ್ ತೀರ್ಥಹಳ್ಳಿ
ಸಂಗೀತ: ವಿನು ಮನಸು
ಛಾಯಾಗ್ರಹಣ: ಪ್ರವೀಣ್.ಎಸ್
ಸಂಕಲನ: ಅಕ್ಷಯ್ ಪಿ ರಾವ್
ತಾರಾಗಣ: ಸುಬ್ಬು, ಧನುಗೌಡ, ವರ್ಷ ಆಚಾರ್ಯ, ಪವಿತ್ರ, ಸುಚ್ಚೇಂದ್ರ ಪ್ರಸಾದ್, ದತ್ತಣ್ಣ, ನೀನಾಸಂ ಅಶ್ವತ್, ಮಿಮಿಕ್ರಿ ಗೋಪಿ, ಶರ್ಮಿತಾ ಶೆಟ್ಟಿ ಮತ್ತು ಇತತರು.

ಅಪ್ಪಟ ಮಲೆನಾಡಿನ ಸಿನಿಮಾ
‘ಹೊಂಬಣ್ಣ’ ಅಪ್ಪಟ ಮಲೆನಾಡಿನ ಸಿನಿಮಾ. ಚಿತ್ರದ ಪ್ರತಿ ದೃಶ್ಯದಲ್ಲೂ ಮಲೆನಾಡಿನ ವೈಸಿರಿ ಎದ್ದು ಕಾಣುತ್ತೆ. ಕತೆಯೂ ಅಷ್ಟೇ ಮಲೆನಾಡಿನ ಅರಣ್ಯ ಮತ್ತು ಅಲ್ಲಿನ ಮುಗ್ದ ಜನರ ಮಧ್ಯೆಯೇ ಸಾಗುತ್ತೆ. ಹೊಂಗೆಬೈಲ್ ಕಾಡು ಅಂದ್ರೆ ಅಲ್ಲಿನ ಘಟನೆಗಳೇ ವಿಚಿತ್ರ.

‘ಹೆಬ್ಬೆಟ್ಟೆಬೆಟ್ಟ’ದಲ್ಲಿ ಭೂತವಿದೆ. ಅಲ್ಲಿ ಹೋದರೇ ಯಾರು ಜೀವಂತವಾಗಿ ಉಳಿಯಲ್ಲ ಎಂಬುದು ಜನರ ನಂಬಿಕೆ. ಇದರ ಜೊತೆ ನವಶಕ್ತಿ ಕ್ರಾಂತಿಕಾರಿಗಳ ಹೋರಾಟ. ಇವರನ್ನ ಸೆದೆ ಬಡಿಯಲು ಸರ್ಕಾರದಿಂದ ವಿಶೇಷ ಪೊಲೀಸ್ ತಂಡ.

ಮಲೆನಾಡಿನ ಕ್ರಾಂತಿ ಕಥೆ
ಇನ್ನು ತಲೆಮಾರುಗಳಿಂದಲೂ ಅರಣ್ಯವನ್ನೇ ನಂಬಿ ಜೀವನ ನಡೆಸುತ್ತಿರುವ ಜನರನ್ನ ಅರಣ್ಯ ಪ್ರದೇಶ ಒತ್ತುವರಿ ಕಾಯಿದೆ ಅನ್ವಯ ಕಾಡಿನಿಂದ ಒತ್ತುವರಿ ತೆರವು ಮಾಡಿಸಲು ಹೈ ಕೋರ್ಟ್ ಸೂಚನೆ ನೀಡಿರುತ್ತೆ. ಇದರ ಅನ್ವಯ ಮಲೆನಾಡಿನ ಕಾಡಿನಲ್ಲಿರುವ ರೈತರನ್ನ ಕಾಡಿನಿಂದ ಹೊರಗಡೆ ಹಾಕಲು ಅರಣ್ಯ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಾರೆ.
ಈ ನೀತಿಯನ್ನ ರೈತರು ಧಿಕ್ಕರಿಸುತ್ತಾರೆ. ಇದರ ಜೊತೆಗೆ ಮಲೆನಾಡಿನ ಆಚಾರ, ವಿಚಾರ, ಭೂತಾರಾಧನೆಯನ್ನ ಕಣ್ಣಿಗೆ ಕಟ್ಟಿ ಕೊಡಲಾಗಿದೆ.

ಕುತೂಹಲಭರಿತವಾದ ಚಿತ್ರಕಥೆ

ಹೀಗೆ ಒಂದೇ ಸಿನಿಮಾದಲ್ಲಿ ನಾನಾ ಅಂಶಗಳನ್ನು ಹೇಳಿರುವ ‘ಹೊಂಬಣ್ಣ’ ಕೂತುಹಲದಿಂದ ಕೂಡಿದೆ. ಹೆಬ್ಬೆಟ್ಟೆಬೆಟ್ಟದಲ್ಲಿ ನಡೆಯುತ್ತಿರುವ ಆ ನಿಗೂಡ ಏನು? ಮತ್ತೊಂದೆಡೆ ಹೊಂಬಣ್ಣ ಮತ್ತು ಸ್ನೇಹಿತರ ಕುಟುಂಬ ಅರಣ್ಯ ಬಿಟ್ಟು ಹೊರಗೆ ಹೋಗ್ತಾರ? ಎಂಬ ಆಸಕ್ತಿ ಪ್ರೇಕ್ಷಕರನ್ನ ಹಿಡಿದಿಡುತ್ತೆ. ಇದರ ಜೊತೆಗೆ ಧನು ಮತ್ತು ತುಂಗಾ ಲವ್ ಸ್ಟೋರಿ ಮೂಲಕ ಪ್ರೇಕ್ಷಕರನ್ನ ರಂಜಿಸಲು ‘ಹೊಂಬಣ್ಣ’ ಪ್ರಯತ್ನ ಪಟ್ಟಿದೆ.

ಗಮನ ಸೆಳೆಯುವ ‘ಹೊಂಬಣ್ಣ’ ಕಲಾವಿದರು

ಚಿತ್ರದ ಶೀರ್ಷಿಕೆ ಪಾತ್ರವನ್ನ (ಹೊಂಬಣ್ಣ) ನಿರ್ವಹಿಸಿರುವ ಸುಬ್ಬು ತಮ್ಮ ಮುಗ್ದ ಅಭಿನಯದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇವರು ಜೊತೆಯಲ್ಲಿ ಧನುಗೌಡ, ವರ್ಷ ಆಚಾರ್ಯ, ಪವಿತ್ರ, ನೀನಾಸಂ ಅಶ್ವತ್ ಕೂಡ ಇಷ್ಟವಾಗುತ್ತಾರೆ. ಇನ್ನು ಚಿತ್ರದ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸುಚ್ಚೇಂದ್ರ ಪ್ರಸಾದ್, ದತ್ತಣ್ಣ, ಶರ್ಮಿತಾ ಶೆಟ್ಟಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶನ ಹೇಗಿದೆ?
ರಕ್ಷಿತ್ ತೀರ್ಥಹಳ್ಳಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಒಂದು ವಿಶೇಷ ಸಿನಿಮಾವನ್ನ ನೀಡುವಲ್ಲಿ ಸಫಲರಾಗಿದ್ದಾರೆ. ಮಲೆನಾಡು ಕೇವಲ ಸ್ವರ್ಗವಲ್ಲ, ಅಲ್ಲಿ ಸಮಸ್ಯೆಗಳ ಸಾಗರವಿದೆ ಎಂಬುದನ್ನ ನೈಜವಾಗಿ ತೋರಿಸಿ ಕೊಡುವಲ್ಲಿ ಗಮನ ಸೆಳೆಯುತ್ತಾರೆ.

ಚಿತ್ರದಲ್ಲಿ ಹೆಚ್ಚು ಗಮನ ಸೆಳೆಯುವುದು
‘ಹೊಂಬಣ್ಣ’ ಚಿತ್ರದಲ್ಲಿ ಹೆಚ್ಚು ಗಮನ ಸೆಳೆಯವುದು ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತ. ಮಲೆನಾಡಿನ ದಟ್ಟಾರಣ್ಯವನ್ನ ಸುಂದರವಾಗಿ ತೋರಿಸುವಲ್ಲಿ ಪ್ರವೀಣ್.ಎಸ್ ಯಶಸ್ವಿಯಾಗಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತ ನೀಡಿದ್ದು, ಕಥೆಗೆ ಪೂರಕವಾಗಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತೆ.

ಕೊನೆಯ ಮಾತು ‘ಹೊಂಬಣ್ಣ’ ಚಿತ್ರದಲ್ಲಿ ಹಲವು ಪಾತ್ರಗಳಿವೆ.

ಆದ್ರೆ, ಆ ಪಾತ್ರಗಳ ಹಿನ್ನೆಲೆಯಿಲ್ಲದೇ ಇರುವುದು ನೋಡುಗರಿಗೆ ಗೊಂದಲು ಉಂಟು ಮಾಡುತ್ತೆ. ಕೆಲವು ನಿಗೂಢಗಳಿಗೆ ಉತ್ತರ ಸಿಗಲ್ಲ. ಲವ್ ಸ್ಟೋರಿ ಕಥೆಗೆ ಅಂತ್ಯವಿಲ್ಲ. ಪೊಲೀಸ್ ಆಫೀಸರ್ ಮಾಡುವ ಎನ್ ಕೌಂಟರ್ ಗಳು ಅತಿರೇಕವೆನಿಸುತ್ತೆ. ಆದ್ರೆ, ಅಂತಿಮವಾಗಿ ಉಳಿಯವುದು ಒಂದೇ ರೈತರನ್ನ ಅರಣ್ಯದಿಂದ ಒಕ್ಕಲೆಬ್ಬಿಸುವುದು ಮತ್ತು ಅದರ ವಿರುದ್ಧದ ಕ್ರಾಂತಿ. ಕೊನೆಯದಾಗಿ ಹೇಳುವುದಾದರೇ, ಮಲೆನಾಡಿನ ಅಂದ-ಚೆಂದ ನೋಡಿರುವ ನಿಮಗೆ, ಅಲ್ಲಿನ ಹೋರಾಟ, ಕ್ರಾಂತಿ ಹೇಗಿರುತ್ತೆ ಎಂಬುದರ ಪರಿಚಯವನ್ನ ‘ಹೊಂಬಣ್ಣ’ ಸಿನಿಮಾ ಮಾಡಿಕೊಡುತ್ತೆ. ಒಮ್ಮೆ ನೋಡಿ ಹೊಸಬರ ಚಿತ್ರವನ್ನ ಪ್ರಾತ್ಸಾಹಿಸಿ.

Leave a Reply

You may also like

22 March Kannada Songs Download

22 March New Kannada Songs Download Directed by: